ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟ; ಅಧಿಕಾರಕ್ಕೆ ಕುತ್ತು

Rashmi Kasaragodu
Updated On : 14 Nov 2013, 1:11 am

ಲಿಂಗಸ್ಗೂರು: ಸ್ಥಳೀಯ ಸಂಸ್ಥೆಗಳಲ್ಲಿ ಅಗತ್ಯ ಬಹುಮತವಿದ್ದರೂ ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟ, ಒಣ ಪ್ರತಿಷ್ಠೆ ಪರಿಣಾಮ ಅಧಿಕಾರ ಗಳಿಸುವಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಅನ್ಯ ಪಕ್ಷಗಳವರು ಅಧಿಕಾರ ಪಡೆಯಲು ವರವಾಗಿ ಪರಿಣಮಿಸಿದೆ. ಇದಕ್ಕೆ ತಾಪಂ ಅಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸ ನಿರ್ಣಯ ಅಂಗೀಕಾರವೇ ಸಾಕ್ಷಿಯಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಿಂದ ಆರಂಭಗೊಂಡ ಕಾಂಗ್ರೆಸ್ ನಾಯಕರ ಮಧ್ಯದ ಭಿನ್ನಮತ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಪಡೆಯಬೇಕೆಂಬ ಅಭ್ಯರ್ಥಿಗಳ ಆಕಾಂಕ್ಷೆಯನ್ನು ಅಪೋಷನ ಪಡೆಯುತ್ತಿದೆ.
 ಜಿಪಂ, ತಾಪಂ, ಗ್ರಾಪಂ, ಎಪಿಎಂಸಿ, ಪುರಸಭೆ, ಪಟ್ಟಣ ಪಂಚಾಯ್ತಿಗಳ ಚುನಾವಣೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಶರಣಪ್ಪ ಮೇಟಿ ನೇತೃತ್ವದಲ್ಲಿ ಪಾಮಯ್ಯ ಮುರಾರಿ, ಭೂಪನಗೌಡ ಕರಡಕಲ್, ಗುಂಡಪ್ಪ ನಾಯಕ, ಲಾಲಅಹ್ಮದಸಾಬ, ಖಾದರಪಾಶಾ, ಮಲ್ಲಣ್ಣ ವಾರದ, ಶರಣಬಸಪ್ಪ ಗುಡದನಾಳ, ಬಸವರಾಜ ಗಣೇಕಲ್ ಹಲವು ನಾಯಕರ ಮುಂದಾಳತ್ವದಿಂದ ಉತ್ತಮ ಫಲಿತಾಂಶ ಪಡೆದು ಅಧಿಕಾರ ಗದ್ದುಗೆ ಏರುವಲ್ಲಿ ಸಫಲರಾಗಿದ್ದರು. ಇದರಿಂದ ಜೆಡಿಎಸ್, ಬಿಜೆಪಿ ಪಕ್ಷಗಳಿಗೆ ತೀವ್ರ ಹಿನ್ನೆಡೆ ಉಂಟಾಗುತ್ತಿತ್ತು.
ಹಾವು ಮುಂಗುಸಿಯಂತೆ: ವಿಧಾನಸಭಾ ಚುನಾವಣೆ ನಂತರದ ದಿನಗಳಲ್ಲಿ ಟಿಕೆಟ್ ಹಂಚಿಕೆಯ ಅಸಮಧಾನದಿಂದ ಭಿನ್ನಮತ ಸ್ಪೋಟಗೊಂಡು ಕಾಂಗ್ರೆಸ್ ನಾಯಕರು ಹಾವು ಮುಂಗುಸಿಯಂತೆ ಕಚ್ಚಾಟಕ್ಕಿಳಿದರು.
  ಇದರಿಂದ ಎರಡು ಬಣಗಳು ಸೃಷ್ಟಿಯಾಗಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಭೂಪನಗೌಡ ಕರಡಕಲ್, ಶರಣಗೌಡ ಬಯ್ಯಾಪುರ, ಶರಣಪ್ಪ ಮೇಟಿ, ಪಾಮಯ್ಯ ಮುರಾರಿ ಸೇರಿದಂತೆ ಪ್ರಮುಖ ನಾಯಕರ ಮಧ್ಯೆ ಬಿರುಕು ದೊಡ್ಡದಾಗುತ್ತಾ ಸಾಗಿತು. ಇದರ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿದ್ದರೂ ಮಣ್ಣು ಪಾಲಾದವು.
ಅವಿಶ್ವಾಸ ನಿರ್ಣಯಕ್ಕೆ: ಇತ್ತೀಚಿಗೆ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷರ ಪದಚ್ಯುತಿಗೆ ಆಗ್ರಹಿಸಿದ್ದರು. ಅಧ್ಯಕ್ಷರ ಅಧಿಕಾರ ಮುಂದುವರಿಕೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ವಿಪ್ ಜಾರಿಗೊಳಿಸಿದರೂ ಇದಕ್ಕೆ ಕಿವಿಗೊಡದ ಕೆಲ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಒಕ್ಕೊರಲಿನಿಂದ ಒತ್ತಾಯಿಸಿ ಜಯಶೀಲರಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ ಪ್ರಮುಖ ಕಾರಣ. ನಾಯಕರ ಮಧ್ಯದ ಒಣ ಪ್ರತಿಷ್ಠೆ ಆಡಳಿತ ಕಾಂಗ್ರೆಸ್ಗೆ ಮುಳುವಾಗಿದೆ.
ಬೇರೆ ಪಕ್ಷಗಳತ್ತ ಸದಸ್ಯರು: ತಾಪಂ.ನಲ್ಲಿ ಒಟ್ಟು 26 ಜನ ಸದಸ್ಯರಿದ್ದು, ಕಾಂಗ್ರೆಸ್ನ 13, ಬಿಜೆಪಿ 4, ಜೆಡಿಎಸ್ 8 ಜನ ಸದಸ್ಯರು ಹಾಗೂ ಪಕ್ಷೇತರ ಒಬ್ಬ ಸದಸ್ಯರಿದ್ದು, ಅಧಿಕಾರಕ್ಕೆ ಬೇಕಾದ ಅಗತ್ಯ ಬೆಂಬಲ ಕಾಂಗ್ರೆಸ್ ಪಕ್ಷ ಪಡೆಯಬಹುದಾಗಿದೆ. ಆದರೆ ಆಂತರಿಕ ಕಚ್ಚಾಟಕ್ಕೆ ಅಧಿಕಾರದ ಕನಸು ಬಿಸಿಲುಗುದುರೆಯಾಗಿ ಪರಿಣಮಿಸಿದೆ.
  ಇದರ ಲಾಭ ಪಡೆದ ಬಿಜೆಪಿ, ಜೆಡಿಎಸ್ ಪಕ್ಷಗಳು ಒಂದಾಗಿ ಕಾಂಗ್ರೆಸ್ನ ಕೆಲ ಸದಸ್ಯರನ್ನು ತನ್ನತ್ತ ಸೆಳೆದು ಅಧಿಕಾರ ಚಲಾಯಿಸುವ ಮೂಲಕ ಕಾಂಗ್ರೆಸ್ನ ಭಿನ್ನಮತವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ. ಕೈ ಪಾಳಯದ ನಾಯಕರ ಮಧ್ಯದ ಭಿನ್ನಮತ ಹೀಗೇ ಮುಂದುವರಿದರೆ ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಚಲಾಯಿಸಲು ಕೈ ನಾಯಕರೇ ಅಡ್ಡಿಯಾದರೂ ಅಚ್ಚರಿ ಪಡಬೇಕಿಲ್ಲ.
ಒಗ್ಗಟ್ಟು ಪ್ರದರ್ಶನ ಅಗತ್ಯ: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಲಿಂಗಸ್ಗೂರು ನಾಯಕರ ಮಧ್ಯೆದ ಭಿನ್ನಮತದ ಶಮನಕ್ಕೆ ಮುಂದಾಗಿ ಬಯ್ಯಾಪುರ ಹಾಗೂ ಮೇಟಿ ಬಣಗಳನ್ನು ಒಂದಾಗಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವುದು ಅಗತ್ಯವಾಗಿದೆ.
  ಇಲ್ಲದಿದ್ದರೆ ಗಂಡ- ಹೆಂಡರ ಮಧ್ಯದ ಜಗಳಕ್ಕೆ ಕೂಸು ಬಡವಾಯಿತು ಎನ್ನುವ ಗಾಧೆಯಂತೆ ಕಾರ್ಯಕರ್ತರು ನಾಯಕರ ಭಿನ್ನಮತದಿಂದ ಹೈರಾಣಾಗಿ ಪಕ್ಷದ ಸಂಘಟನೆಗೆ ತೊಡಕಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement