ರಸ್ತೆ ಕಾಮಗಾರಿ ಗುಣಮಟ್ಟದ ಕಾಯ್ದುಕೊಳ್ಳದಿದ್ದರೆ ಹೋರಾಟ: ಜೆಡಿಎಸ್
ದೇವದುರ್ಗ: ಪಟ್ಟಣದಿಂದ ತಿಂಥಿಣಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಕಾಮಗಾರಿ ಕೆಶಿಪ್ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಜೆಡಿಎಸ್ ಮುಖಂಡ ವಿ.ಎಂ. ಮೇಟಿ ವಕೀಲರು ಆರೋಪಿಸಿದ್ದಾರೆ. ಕೆಶಿಪ್ ವತಿಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಮಲಾದಿಂದ ತಿಂಥಿಣಿ ಬ್ರಿಜ್ವರೆಗೆ ಮುಖ್ಯ ರಸ್ತೆ ಕಾಮಗಾರಿ ಜಾರಿಯಲ್ಲಿದೆ. ಪ್ರತಿ ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅಂದಾಜು 2 ರಿಂದ 3 ಕೋಟಿ ರು.ಅನುದಾನ ವೆಚ್ಚ ಮಾಡಲಾಗುತ್ತಿದೆ. ಆದರೆ ಕಾಮಗಾರಿ ಗುಣಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಟೀಕಿಸಿದರು.
ಹಾಲಿ ರಸ್ತೆಯನ್ನು ಕನಿಷ್ಟ ಐದು ಅಡಿ ಆಳ ತೆಗೆದು ಮರಂ ಹಾಕದ ಗುತ್ತಿಗೆದಾರರು ಸದ್ಯದ ಡಾಂಬರು ರಸ್ತೆಯ ಮೇಲೆ ಮರಂ ಹಾಕಿದ್ದಾರೆ. ರಸ್ತೆ ಅಕ್ಕ ಪಕ್ಕ ರಸ್ತೆ ಅಗಲೀಕರಣ ಮಾಡಿದ್ದು ಬಿಟ್ಟರೆ ರಸ್ತೆಯನ್ನು ಅಗೆದು ಮರಂ ಭರ್ತಿ ಮಾಡಿಲ್ಲ. ಕಾಟಾಚಾರಕ್ಕೆ ಮಣ್ಣು ಸುರಿಯಲಾಗಿದೆ ಎಂದು ಆರೋಪಿಸಿದರು. ಕಲ್ಮಲಾದಿಂದ ತಿಂಥಿಣಿ ಬ್ರಿಜ್ವರೆಗೆ ರಸ್ತೆ ನಿರ್ಮಾಣಕ್ಕೆ ರು. 200 ಕೋಟಿ ಟೆಂಡರ್ ಪಡೆದ ಮೂಲ ಗುತ್ತಿಗೆದಾರರು ಉಪ ಗುತ್ತಿಗೆ ನೀಡಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಕೆಶಿಪ್ ಅಧಿಕಾರಿಗಳೂ ಉಪಸ್ಥಿತರಿರದಿರುವುದು ಕಾಮಗಾರಿ ಕಳಪೆಗೆ ದಾರಿ ಮಾಡಿದೆ ಎಂದು ಟೀಕಿಸಿದರು. ಸ್ಥಳೀಯ ಶಾಸಕರು ಚುನಾಯಿತ ಜನಪ್ರತಿನಿಧಿಗಳು ಕಾಮಗಾರಿಯತ್ತ ಗಮನಹರಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.