ಎಸ್ಮಾ ವಿರೋಧಿಸಿ 21ರಂದು ಬೆಂಗಳೂರು ಚಲೋ
ಕನ್ನಡಪ್ರಭ ವಾರ್ತೆ ರಾಯಚೂರು ನ.14
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ಎಸ್ಮಾ ಕಾಯಿದೆ ಜಾರಿಗೆ ಮುಂದಾಗಿದೆ. ಸರ್ಕಾರದ ಕ್ರಮ ಖಂಡಿಸಿ ನ.21ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ನ ಉಪಾಧ್ಯಕ್ಷ ಸಿದ್ದಪ್ಪ ಭಾಲ್ಕಿ ಹೇಳಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಈ ಹಿಂದೆ ಸಂಸ್ಥೆಯ ಕಾರ್ಮಿಕರು ನಡೆಸಿದ ಮುಷ್ಕರದ ವೇಳೆ 41 ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ್ದು, ಇದುವರೆಗೆ ಈಡೇರಿಸಿಲ್ಲ. ನಾಲ್ಕು ನಿಗಮಗಳಲ್ಲಿ ನಿವೃತ್ತರಾಗಿರುವ ನೌಕರರಿಗೆ ವಿವಿಧ ನಿವೃತ್ತಿ ನಂತರದ ಸವಲತ್ತುಗಳನ್ನು ನೀಡಿಲ್ಲ ಎಂದು ಆರೋಪಿಸಿದರು.
700 ಕೋಟಿ ಬಾಕಿ: ಕಾರ್ಮಿಕರ ಸಂಬಳದಿಂದ ಕಡಿತಗೊಳಿಸಿದ ಜೀವ ವಿಮಾ ನಿಗಮದ ಕಂತು ಹಾಗೂ ಸಂಸ್ಥೆಯ ಸಹಕಾರ ಸಂಘದ ಸಾಲದ ಮೊತ್ತವನ್ನು ಪಾವತಿಸಿಲ್ಲ. ಅಷ್ಟೇ ಅಲ್ಲ, ನಾಲ್ಕು ನಿಗಮಗಳಿಂದ ಕಾರ್ಮಿಕರಿಗೆ ಸುಮಾರು 700 ಕೋಟಿ ಬಾಕಿಯಿದ್ದು ಇದನ್ನು ಪಾವತಿಸಲು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸಂಸ್ಥೆಯ ಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ತಾರೀಕಿನೊಳಗೆ ವೇತನ ಪಾವತಿಯಾಗುತ್ತಿಲ್ಲ. ಸರ್ಕಾರದಿಂದ ನಿಗಮಗಳಿಗೆ 400 ಕೋಟಿ . ಬಾಕಿಯಿದೆ. ಈ ಅನುದಾನ ಬಿಡುಗಡೆಯ ನಂತರವೇ ಕಾರ್ಮಿಕರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಪಾವತಿಸುವುದಾಗಿ ಸಂಸ್ಥೆಯ ಅಧಿಕಾರಿಗಳು ಹೇಳುತ್ತಿದ್ದು, ಅದರಿಂದಾಗಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಆರೋಪಿಸಿದರು.
ಖಾಸಗಿ ಬಸ್ ಮಾಲೀಕರ ಲಾಬಿ: ರಾಜ್ಯದಲ್ಲಿ ಖಾಸಗಿ ಬಸ್ಗಳ ಸಂಚಾರ ಲಾಬಿ ಸರ್ಕಾರದ ಮೇಲೆ ಪ್ರಭಾವ ಬೀರಿದೆ. ಸರ್ಕಾರವು ಖಾಸಗಿ ಬಸ್ ಗಳ ಹಾವಳಿ ನಿಯಂತ್ರಿಸುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ಫೆಡರೇಷನ್ನಿಂದಲೇ ಈ ಕಾರ್ಯ ಮಾಡುತ್ತಿದ್ದು ಅದರಿಂದ ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಳ ಕಂಡಿದೆ ಎಂದು ತಿಳಿಸಿದರು.
ಹೋರಾಟ ಹತ್ತಿಕ್ಕಲು ಎಸ್ಮಾ: ಕಳೆದ ಅನೇಕ ವರ್ಷಗಳಿಂದ ಸಾರಿಗೆ ಸಂಸ್ಥೆಯ ಕಾರ್ಮಿಕರು ಕಾಲದಿಂದ ಕಾಲಕ್ಕೆ ವಿವಿಧ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಸಾರಿಗೆ ಸಂಸ್ಥೆ ಸೇರಿ ವಿವಿಧ ಕಂಪನಿ, ಮಂಡಳಿಗಳ ನೌಕರರ ಹೋರಾಟದ ಹಕ್ಕು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರ ಎಸ್ಮಾ ಕಾಯಿದೆ ಜಾರಿಗೆ ಮುಂದಾಗಿದೆ ಎಂದು ದೂರಿದರು.
ವಾಸ್ತವದಲ್ಲಿ ಎಸ್ಮಾ ಕಾಯಿದೆ ಜಾರಿಗೆ ತರುವಂಥ ಪರಿಸ್ಥಿತಿ ರಾಜ್ಯದಲ್ಲಿಲ್ಲ. ಆದರೆ ಅನಗತ್ಯವಾಗಿ ಕಾರ್ಮಿಕರ ಹಕ್ಕು ಕಿತ್ತುಕೊಳ್ಳುವ ಉದ್ದೇಶದಿಂದ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಎಸ್ಮಾ ಕಾಯಿದೆ ಜಾರಿಗೆ ಆಲೋಚಿಸಿದೆ ಎಂದು ಗೊತ್ತಾಗಿದೆ. ಇಂಥ ಕಾರ್ಮಿಕ ವಿರೋಧಿ ಕಾನೂನು ಜಾರಿ ವಿರೋಧಿಸಿ ನ.21ರಂದು ಸಂಸ್ಥೆಯ ಕಾರ್ಮಿಕರು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ 4 ವರ್ಷಕ್ಕೊಮ್ಮೆ ಕಾರ್ಮಿಕ ಸಂಘಗಳಿಗೆ ಮಾನ್ಯತೆ ಕೊಡುವ ಬಗ್ಗೆ ಚುನಾವಣೆ ನಡೆಸಬೇಕಿತ್ತು. ಆದರೆ 1996ರಿಂದ ಇದುವರೆಗೆ ಚುನಾವಣೆ ನಡೆಸಿಲ್ಲ. ಈ ಮೂಲಕ ಸಂಸ್ಥೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲಾಗಿದೆ ಎಂದು ಟೀಕಿಸಿದರು.
ಒಂದು ನಿಗಮದಿಂದ ಮತ್ತೊಂದು ಸಾರಿಗೆ ನಿಗಮಕ್ಕೆ ಅಂತರ ವರ್ಗಾವಣೆಗೆ ಈ ಮೊದಲು ಅವಕಾಶವಿರಲಿಲ್ಲ. ಕೇವಲ ಅಧಿಕಾರಿ ಗಳನ್ನು ಮಾತ್ರ ವರ್ಗಾಯಿಸಲಾಗುತ್ತಿತ್ತು. ಆದರೆ ಈಚೆಗೆ ನ್ಯಾಯಾಲಯ ಆದೇಶ ಹೊರಡಿಸಿದ್ದು, ಕಾರ್ಮಿಕರನ್ನೂ ಅಂತರ ನಿಗಮಗಳಿಗೆ ವರ್ಗಾವಣೆ ಮಾಡುವಂತೆ ಸರ್ಕಾರವನ್ನು ಹೋರಾಟದ ವೇಳೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕಿದೆ: ರಾಜ್ಯದ ಸಾರಿಗೆ ನಿಗಮಗಳಿಗೆ ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ ಡೇಸೆಲ್ ಒದಗಿಸಬೇಕು. ಡೀಸೆಲ್ ಮೇಲಿನ ತೆರಿಗೆ ಮನ್ನಾ ಮಾಡುವ ಮೂಲಕ ಸಂಸ್ಥೆಯ ಆದಾಯ ಹೆಚ್ಚಳ ಮತ್ತು ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವಂತೆ ಹೋರಾಟದಲ್ಲಿ ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.21ರಂದು ಬೆಂಗಳೂರು ಚಲೋ ಹೋರಾಟ ಆಯೋಜಿಸಲಾಗಿದೆ. ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಈ ಹೋರಾಟದಿಂದ ಅಂದು ಬಸ್ ಸಂಚಾರಕ್ಕೆ ಯಾವುದೇ ರೀತಿಯಿಂದ ತೊಂದರೆಯಾಗದು ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶ್ರೀಶೈಲರೆಡ್ಡಿ, ಮುಜಿಬುರ್ ರೆಹಮಾನ್ ಇದ್ದರು.