ಖಾಸಗಿ ಬಸ್‌ಗಳ ಆಟಾಟೋಪಕ್ಕೆ ಮೂಗುದಾರ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ರಾಯಚೂರು ನ.14
ಆಂಧ್ರದ ಮಹೆಬೂಬ್ ನಗರದಲ್ಲಿ ಕೆಲ ದಿನಗಳ ಹಿಂದೆ ಖಾಸಗಿ ಬಸ್ ಬೆಂಕಿಗಾಹುತಿಯಾದ ನಂತರದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ಎಚ್ಚೆತ್ತುಕೊಂಡಿದೆ. ಆದಾಯದ ಹಾನಿ ತಡೆಯಲು ಹಾಗೂ ಸರ್ಕಾರಿ ಬಸ್‌ಗಳು ಸುರಕ್ಷಿತ ಎಂಬ ಮಾಹಿತಿಯನ್ನು ಪ್ರಯಾಣಿಕರಿಗೆ ರವಾನಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ಮೊರೆ ಹೋಗಿದೆ.
ಆಂಧ್ರದಲ್ಲಿ ನಡೆದ ಬಸ್ ದುರಂತದ ನಂತರ ಖಾಸಗಿ ಬಸ್‌ಗಳಲ್ಲಿ ಸಂಚರಿಸಲೂ ಪ್ರಯಾಣಿಕರು ಹಿಂದೇಟು ಹಾಕುವಂತಾಗಿದೆ. ಆದರೂ ಸರ್ಕಾರಿ ಬಸ್ ನಿಲ್ದಾಣಗಳ ಬಳಿ ದಿನವಿಡೀ ಮ್ಯಾಕ್ಸಿಕ್ಯಾಬ್‌ಗಳ ಹಾವಳಿಯಾದರೆ, ಸಂಜೆಯಾಗುತ್ತಿದ್ದಂತೆಯೇ ಖಾಸಗಿ ಬಸ್‌ಗಳ ಗದ್ದಲ.
ಜಿಲ್ಲಾಧಿಕಾರಿಗೆ ಪತ್ರ: ಪರಿಣಾಮ ಇಲ್ಲಿನ ಸಾರಿಗೆ ಸಂಸ್ಥೆಗೆ ಲಕ್ಷಾಂತರ ಆದಾಯದ ಖೋತಾ ಆಗುತ್ತಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಅಕ್ರಮವಾಗಿ ಸಂಚರಿಸುತ್ತಿರುವ ಖಾಸಗಿ ಬಸ್‌ಗಳ ಸಂಚಾರ ನಿಯಂತ್ರಣಕ್ಕೆ ಸಂಸ್ಥೆ ಸಜ್ಜಾಗಿದೆ. ಈಚೆಗೆ ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಜಿಲ್ಲೆಯಿಂದ ವಿವಿಧೆಡೆ ತೆರಳುವ ಖಾಸಗಿ ಬಸ್‌ಗಳ ದಾಖಲೆ ಪರಿಶೀಲನೆ ಮತ್ತು ಕ್ರಮಕ್ಕೆ ಮನವಿ ಮಾಡಲಾಗಿದೆ.
ಕಾಯಿದೆಗಿಲ್ಲ ಬೆಲೆ: ರಾಜ್ಯದ ಎಲ್ಲ ಬಸ್ ನಿಲ್ದಾಣಗಳಿಂದ 500 ಮೀಟರ್ ಸುತ್ತಲಿನ ಪ್ರದೇಶದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ಈ ಕಾಯಿದೆ ಜಿಲ್ಲೆಗೂ ಅನ್ವಯವಾಗುತ್ತದೆ. ಆದರೆ ಕಾಯಿದೆ ಜಾರಿ ಮಾತ್ರ ಸಾಧ್ಯವಾಗಿಲ್ಲ. ಪರಿಣಾಮ ಹಗಲಿನಲ್ಲಿ ಮ್ಯಾಕ್ಸಿ ಕ್ಯಾಬ್‌ಗಳು, ಜೀಪುಗಳು ಪ್ರಯಾಣಿಕರನ್ನು ಕರೆದೊಯ್ದರೆ, ರಾತ್ರಿಯಾಗುತ್ತಿದ್ದಂತೆಯೇ ಜಿಲ್ಲೆಯ ಬಹುತೇಕ ಬಸ್ ನಿಲ್ದಾಣಗಳ ಬಳಿ ಹಾಜರಾಗುವ ಖಾಸಗಿ ಬಸ್‌ಗಳು ಪ್ರಯಾಣಿಕರ ಗಮನ ಸೆಳೆದು ಕರೆದೊಯ್ಯುವುದು ಹಳೆಯ ಸಂಗತಿ.
ಸದ್ಯ ನಗರ ಸೇರಿದಂತೆ ಜಿಲ್ಲಾದ್ಯಂತದಿಂದ ಬೆಂಗಳೂರು, ಉಡುಪಿ, ಬೆಳಗಾವಿ ಮತ್ತು ಗೋವಾ ಸೇರಿ ವಿವಿಧ ಸ್ಥಳಗಳಿಗೆ ಖಾಸಗಿ ಬಸ್‌ಗಳ ಸಂಚಾರವಿದೆ.
16 ಖಾಸಗಿ ಬಸ್‌ಗಳು: ಜಿಲ್ಲಾ ಕೇಂದ್ರ ರಾಯಚೂರಿನಿಂದ ವಿವಿಧ ನಗರಗಳಿಗೆ ವಿವಿಧ ಸಂಸ್ಥೆಗಳ 6 ಖಾಸಗಿ ಬಸ್‌ಗಳು ತೆರಳುತ್ತವೆ. ಸಿಂಧನೂರು, ಹಟ್ಟಿ, ಲಿಂಗಸ್ಗೂರು, ಮಾನವಿ ಸೇರಿ ಜಿಲ್ಲೆಯಿಂದ ಒಟ್ಟು 16 ಖಾಸಗಿ ಬಸ್‌ಗಳು ದಿನವೂ ಸಂಚರಿಸುತ್ತವೆ ಎಂದು ಗೊತ್ತಾಗಿದೆ. ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ವರ ರೆಡ್ಡಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಜಿಲ್ಲೆಯಿಂದ ದಿನವೂ 16 ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಈ ಬಸ್‌ನವರು ಒಪ್ಪಂದದ ಮೇಲೆ ವಾಹನ ಓಡಿಸುವುದಾಗಿ ದಾಖಲೆಗಳಲ್ಲಿ ನಮೂದಿಸಿ, ಎಲ್ಲ ನಿಯಮ ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಕೋರಿ ಪತ್ರ ಬರೆಯಲಾಗಿದೆ ಎಂದಿದ್ದಾರೆ.
ಕಾನೂನು ಉಲ್ಲಂಘನೆ: ಹಾಗೆಯೇ ಖಾಸಗಿ ವಾಹನಗಳವರು ಒಪ್ಪಂದದ ಮೇರೆಗೆ ಎಂದ ಮೇಲೆ ಅವರು ಪ್ರಮುಖ ಸ್ಥಳಗಳಿಂದ ಪ್ರಯಾಣಿಕರಿಗೆ ಟಿಕೆಟ್ ನೀಡಿ ಅವರಿರುವ ಸ್ಥಳಕ್ಕೆ ತೆರಳಿ ಅಲ್ಲಿಂದ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಟಿಕೆಟ್ ನೀಡಿಕೆಗೆ ಏಜೆಂಟರನ್ನೂ ನಿಗದಿ ಮಾಡುವಂತಿಲ್ಲ. ಬಹಿರಂಗವಾಗಿ ಟಿಕೆಟ್ ಬುಕ್ಕಿಂಗ್ ಕೌಂಟರ್ ತೆರೆಯುವುದು, ಖಾಸಗಿ ಬಸ್ ನಿಲ್ದಾಣಗಳನ್ನು ನಿರ್ವಹಿಸುವಂತಿಲ್ಲ. ಈ ಮೂಲಕ ಪ್ರಯಾಣಿಕರನ್ನು ಸೆಳೆಯದಂತೆ ಕಾನೂನಿದ್ದರೂ, ಎಲ್ಲ ಕಾನೂನು ಉಲ್ಲಂಘಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಎಚ್ಚರಿಕೆ: ಈ ನಿಟ್ಟಿನಲ್ಲಿ ಖಾಸಗಿ ಬಸ್‌ಗಳ ಮತ್ತು ವಾಹನಗಳ ಮಾಲಿಕರಿಗೆ ಈಗಾಗಲೇ ವಾಹನಗಳಿಗೆ ಸಂಬಂಧಿಸಿ, ಮಾಲಿಕರು ಹೊಂದಿರುವ ದಾಖಲೆಗಳನ್ನು ಒದಗಿಸಲು ಜಿಲ್ಲಾಡಳಿತವು ಎಚ್ಚರಿಕೆ ನೀಡಿದೆ ಎಂದು ಗೊತ್ತಾಗಿದ್ದು, ಖಾಸಗಿ ವಾಹನಗಳ ಮಾಲೀಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಆದಾಯ ಖೋತಾ: ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ವ್ಯಾಪ್ತಿಯಲ್ಲಿ ಪ್ರತಿದಿನ ಸಂಸ್ಥೆಗೆ ಖಾಸಗಿ ವಾಹನಗಳ ಸಂಚಾರದಿಂದ 3ರಿಂದ 4 ಲಕ್ಷ ಆದಾಯಕ್ಕೆ ಹೊಡೆತ ಬೀಳುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಒಂದೆಡೆ ಆದಾಯದ ಖೋತಾ ತಡೆದು ಮತ್ತೊಂದೆಡೆ ಅಕ್ರಮವಾಗಿ ಸಂಚರಿಸುವ ಖಾಸಗಿ ವಾಹನಗಳಿಗೆ ಕಡಿವಾಣ ಹಾಕುವ ಕಾರ್ಯಕ್ಕೆ ಆಡಳಿತ ಮುಂದಾಗಿದೆ.
ಜತೆಗೆ ಆಂಧ್ರದ ಮಹೆಬೂಬ್‌ನಗರ ಮತ್ತಿತರೆಡೆ ಖಾಸಗಿ ಬಸ್‌ಗಳು ಬೆಂಕಿಗಾಹುತಿಯಾದ ಘಟನೆ ನಂತರ ಸರ್ಕಾರವೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದರಿಂದಲೇ ಈಶಾನ್ಯ ಸಾರಿಗೆ ಸಂಸ್ಥೆಯು ಇಂಥ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.