'ಬೆಂ' ಬೆಲೆ: ಅಮರಣಾಂತ ಉಪವಾಸ
ಸಿಂಧನೂರು: ಬತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆಗೆ ಒತ್ತಾಯಿಸಿ ನಗರದ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಅನೇಕ ರೈತರು ಗುರುವಾರ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಪ್ರತಿವರ್ಷ ಹಂಗಾಮಿನ ಸಮಯದಲ್ಲಿ ರೈತರಿಗೆ ಅನ್ಯಾಯವಾಗುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ತಕ್ಕ ಪ್ರತಿಫಲ ಸಿಗದೆ ರೈತರು ನಷ್ಟ ಅನುಭವಿಸಿ ಸಾಲದ ಹೊರೆಗೆ ಸಿಲುಕುತ್ತಿದ್ದಾರೆ. ರೈತರು ಯಾವುದೇ ಹೋರಾಟ, ಚಳವಳಿ ಮಾಡಿದರೂ ಸರ್ಕಾರಗಳು ರೈತವಿರೋಧಿ ಧೋರಣೆ ಅನುಸರಿಸುತ್ತಿವೆ. ರೈತರು ಧ್ವನಿ ಎತ್ತಿದಾಗ ಮಾತ್ರ ಅವರನ್ನು ಸಮಾಧಾನ ಮಾಡಲು ತಾತ್ಕಾಲಿಕ ಕ್ರಮಕೈಗೊಳ್ಳುತ್ತದೆ ಹೊರತು ಯಾವುದೇ ಶಾಶ್ವತ ಪರಿಹಾರ ಕ್ರಮ ಇದುವರೆಗೂ ಕೈಗೊಳ್ಳದೆ ಮಾರುಕಟ್ಟೆ ನಿಯಂತ್ರಣವನ್ನು ವಿದೇಶಿ ಬಂಡವಾಳಗಾರರ ಕೈಗೆ ಒಪ್ಪಿಸಿವೆ. ಹೀಗಾಗಿ ರೈತರ ಇಂದಿನ ಸ್ಥಿತಿ ದಯನೀಯ. ಕಾರಣ ಕೂಡಲೇ ರೈತರು ಬೆಳೆದ ಬತ್ತದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು. ಸೋನಾ ಮಸೂರಿ ಬತ್ತಕ್ಕೆ ಕನಿಷ್ಟ 2500 ಮಾರುಕಟ್ಟೆ ಬೆಲೆ ನಿಗದಿಗೊಳಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿಪತ್ರ ಸಲ್ಲಿಸಿದರು.
ಕೆ. ಹುಸೇನಬಾಷ ಕುಷ್ಟಗಿ, ಜಿಲಾನಿಪಟೇಲ್, ಬಿ. ಶರಣಪ್ಪ, ಇಮಾಮ್ ಸಾಬ, ಹೊಳೆಯಪ್ಪ, ಕೆ. ಆದಪ್ಪ ಹೊಸಳ್ಳಿ, ಕೆಜೆಪಿ ತಾಲೂಕು ಅಧ್ಯಕ್ಷ ಮಂಜುನಾಥಗೌಡ, ಮುಖಂಡ ವೆಂಕನಗೌಡ, ಪ್ರಜಾಶಕ್ತಿ ಸಂಘದ ಅಧ್ಯಕ್ಷ ಜಿ.ಬಿ. ಅಮರೇಗೌಡ, ಖಾಜಾ ಪಟೇಲ್ ಮತ್ತಿತರರು ಉಪವಾಸ ಸತ್ಯಾಗ್ರಹ ಕೈಗೊಂಡರು.
ಇನ್ನು ರೈತರ ಈ ಉಪವಾಸ ಸತ್ಯಾಗ್ರಹಕ್ಕೆ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಮಾಜಿ ಶಾಸಕ ನಾಡಗೌಡ, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ರಮೇಶಪ್ಪ ದಿದ್ದಗಿ, ಎಐಟಿಯುಸಿ ಮುಖಂಡ ವೆಂಕನಗೌಡ ಗದ್ರಟಗಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು. ಭಾರತ ಕಮ್ಯೂನಿಷ್ಟ್ ಪಕ್ಷ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್, ಬಿಜೆಪಿ, ಜೆಡಿಎಸ್ ಹಾಗೂ ಕೆಜೆಪಿ ಪಕ್ಷಗಳ ಮುಖಂಡರು ರೈತರ ಚಳವಳಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.