ಸಾಮಾಜಿಕ ಒಳಿತಿಗೆ ಸಹಕರಿಸಿ: ಮದಿಹಾ
ಸಿಂಧನೂರು: ಸಮಾಜದ ಒಳಿತಿಗಾಗಿ, ಕೆಡುಕಿನ ನಿರ್ಮೂಲನೆಗಾಗಿ, ಅನಾಚಾರಗಳ ನಿವಾರಣೆಗಾಗಿ ವಿದ್ಯಾರ್ಥಿನಿಯರನ್ನು ಮತ್ತು ಯುವತಿಯರನ್ನು ಸಂಘಟನೆ ಪ್ರೇರೇಪಿಸಲಿದೆ ಎಂದು ಕರ್ನಾಟಕ ರಾಜ್ಯ ಗರ್ಲ್ಸ್ ಇಸ್ಲಾಮಿಕ್ ಸಂಘಟನೆಯ ಅಧ್ಯಕ್ಷೆ ಮದಿಹಾ ಅಫ್ಶನ್ ಹೇಳಿದರು.
ನಗರದ ಪಟೇಲವಾಡಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ನಿವಾಸಕ್ಕೆ ಭೇಟಿ ನೀಡಿದ ಅವರು, ಸಂಘಟನೆಯ ಉದ್ದೇಶ ಹಾಗೂ ಗುರಿಗಳನ್ನು ತಿಳಿಸಿದರು.
ಬಹುಧರ್ಮೀಯರಿಂದ ಕೂಡಿದ ಈ ದೇಶದಲ್ಲಿ ಸಂಘಟನೆಯು ಪರಸ್ಪರ ಗೌರವ, ವಿಶ್ವಾಸ ಮತ್ತು ಕೋಮು ಸಾಮರಸ್ಯ ಅಗತ್ಯವೆಂದು ಭಾವಿಸುತ್ತದೆ. ಅದಕ್ಕಾಗಿ ತಪ್ಪು ಕಲ್ಪನೆಯ ಅಡ್ಡಗೋಡೆಗಳನ್ನು ಜ್ಞಾನ ಮತ್ತು ತಿಳಿವಳಿಕೆಯ ಮೂಲಕ ಕೆಡವಿ ಹಾಕಬೇಕಾಗಿದೆ. ಇಂತಹ ರಚನಾತ್ಮಕ ಕಾರ್ಯಕ್ಕೆ ತಮ್ಮ ಸಹಕಾರ ಅಗತ್ಯವೆಂದರು.
ಸಾಮಾಜಿಕ ಕಳಕಳಿ ಹಾಗೂ ಜನತೆಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ರಮಾದೇವಿ ಶಂಭೋಜಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟಕಿ ಮೊಹಸಿನ್ ಝರ್ರಿನ್, ಸಿಂಧನೂರು ಸ್ಥಾನಿಯ ಅಧ್ಯಕ್ಷೆ ಪರವಿನ್ ಜಹಾನ್, ಕಾರ್ಯದರ್ಶಿ ರಬಿಯಾ ಬಸ್ರಿ, ಸದಸ್ಯೆಯರಾದ ಫರಾತ್ ಜಹಾನ್ ಮತ್ತು ಸುಮಯ್ಯ ಖಾನಮ್ ಉಪಸ್ಥಿತರಿದ್ದರು.