ಕುಕ್ಕುಂದಾ, ಬಿಆರ್ಎಲ್, ಸೃಜನ್, ಮಂಜುಳಾಗೆ 'ಅಮ್ಮ' ಗರಿ
ಗುಲ್ಬರ್ಗ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನವು ಅಮ್ಮ ಪುರಸ್ಕಾರ ವಿಜೇತರನ್ನು ಘೋಷಿಸಿದೆ.
ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ, ಲೇಖಕಿ ಸಿ.ಜಿ. ಮಂಜುಳಾ, ಮಕ್ಕಳ ಕವಿ ರಾಜಶೇಖರ ಕುಕ್ಕುಂದಾ, ಸಂಶೋಧಕಿ ಡಾ. ಜಯದೇವಿ ಧಾರವಾಡ ಹಾಗೂ ಸೃಜನ್ ಹೊಸಪೇಟೆ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಹಾಗೂ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿ.ಆರ್. ಲಕ್ಷ್ಮಣರಾವ ಅವರ ಮಣಿಮಾಲೆ (ವ್ಯಕ್ತಿಚಿತ್ರ ಬರಹಗಳ ಸಂಕಲನ), ಸಿ.ಜಿ. ಮಂಜುಳಾ ಅವರ ಮಾತುಕತೆ (ಲೇಖನಗಳ ಸಂಕಲನ), ರಾಜಶೇಖರ ಕುಕುಂದಾ ಅವರ ಪುಟಾಣಿ ಪ್ರಾಸಗಳು (ಮಕ್ಕಳ ಕವಿತೆಗಳು), ಡಾ. ಜಯದೇವಿ ಧಾರವಾಡ ಅವರ ವಚನ ಸಂಗೀತ ರತ್ನ ಪಂಡಿತ ಸಿದ್ದರಾಮ ಜಂಬಲದಿನ್ನಿ(ಸಂಶೋಧನಾ ಕೃತಿ), ಸೃಜನ್ ಹೊಸಪೇಟೆ ಅವರ ನನ್ನಿಷ್ಟ (ಅನುವಾದ) ಕೃತಿಗಳನ್ನು 13ನೇ ವರ್ಷದ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 5 ಸಾವಿರ ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ನ.26ರಂದು ಸಂಜೆ 5.30ಕ್ಕೆ ಸೇಡಂನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಅಮ್ಮ ಪ್ರಶಸ್ತಿ ಪ್ರದಾನ ನಡೆಯಲಿದೆ.
ಗೌರವ ಪುರಸ್ಕಾರ: ಕಳೆದ 3 ವರ್ಷಗಳಿಂದ ಆರಂಭಗೊಂಡ ಅಮ್ಮ ಗೌರವ ಪುರಸ್ಕಾರವನ್ನು ನಾಡು- ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಸತ್ಕರಿಸಲಾಗುತ್ತದೆ.
ಈ ಬಾರಿಯ ಅಮ್ಮ ಗೌರವ ಪುರಸ್ಕಾರಕ್ಕೆ ಹೋರಾಟಗಾರ ವೈಜನಾಥ ಪಾಟೀಲ್, ಹಿರಿಯ ಲೇಖಕ ಎಸ್.ಜಿ. ಸಿದ್ದರಾಮಯ್ಯ ತುಮಕೂರು, ಲೇಖಕಿ ಬಾನು ಮುಷ್ತಾಕ್ ಹಾಸನ, ಪ್ರಕಾಶಕ ಕಂಬತ್ತಳ್ಳಿ ಪ್ರಕಾಶ್, ಬೆಂಗಳೂರು ಮತ್ತು ಸೇಡಂನ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಡಾ. ಶಾಂತವೀರ ಸುಂಕದ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ 13ರ ಸಂಭ್ರಮ: ಅಮ್ಮ ಪ್ರಶಸ್ತಿಗೆ ಈಗ 13ನೇ ವರ್ಷದ ಸಂಭ್ರಮ. ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ಪ್ರಶಸ್ತಿ ಇದಾಗಿದೆ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮ ಪ್ರಶಸ್ತಿಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿ ಗೌರವಿಸಿದ್ದಾರೆ. ಈ ಬಾರಿ 316 ಕೃತಿಗಳು ಬಂದಿದ್ದವು ಎಂದು ಅವರು ತಿಳಿಸಿದ್ದಾರೆ.
ದಶಮಾನೋತ್ಸವ ವರ್ಷದಿಂದ ಆರಂಭಗೊಂಡ ಅಮ್ಮ ಗೌರವ ಪುರಸ್ಕಾರವನ್ನು ಮುಂದುವರಿಸಲಾಗಿದೆ. ಐವರಿಗೆ ಅಮ್ಮ ಪ್ರಶಸ್ತಿ ಹಾಗೂ ಅಮ್ಮ ಗೌರವ ಪುರಸ್ಕಾರ ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.