ದಾಖಲೆ ತಿದ್ದಿದ ಸಿಬ್ಬಂದಿ; ಸಚಿವರು ಗರಂ
ರಾಯಚೂರು: ಆಹಾರದ ದಾಸ್ತಾನು ವಿವರ, ದಾಖಲೆಗಳ ತಿದ್ದುವಿಕೆಯ ಗೊಂದಲ, ಗೋದಾಮಿಗೆ ಆಗಮಿಸಿದ ಆಹಾರದ ಪ್ರಮಾಣ ಸೇರಿ ವಿವಿಧ ಮಾಹಿತಿಗೆ ಸಂಬಂಧಿಸಿ ಅಸಮರ್ಪಕ ದಾಖಲೆಗಳನ್ನು ಕಂಡು ರೋಸಿ ಹೋದ ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಈಚೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಣೆ ಪತ್ತೆಯಾದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಸಚಿವರು ಆಹಾರ ನಿಗಮದ ವಿವಿಧ ಗೋದಾಮುಗಳಿಗೆ ಶುಕ್ರವಾರ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಗೋದಾಮಿನ ಉಸ್ತುವಾರಿ ಅಧಿಕಾರಿಗಳಲ್ಲಿನ ದಾಖಲೆಗಳಿಗೆ ತಾಳೆಯಾಗದ್ದರಿಂದ ತೀವ್ರ ಅಸಮಾಧಾನಗೊಂಡರು.
ಶಿಸ್ತುಕ್ರಮ: ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಮಾರಾಟ, ಸಾಗಣೆಗೆ ಇಲಾಖೆಯ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ. ಸಾಗಣೆಯ ಗುತ್ತಿಗೆ ವಹಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿ, ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಜತೆಗೆ ಇಲಾಖೆ ಮಟ್ಟದಲ್ಲಿ ತನಿಖೆಗೆ ಸೂಚಿಸಿದರು.
ಸಿಂಧನೂರಿನಲ್ಲಿ ಈಚೆಗೆ ಪತ್ತೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮದ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಸಚಿವರಿಗೆ ವಿವರಿಸಿ, ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮ ಪತ್ತೆಯಾಗುತ್ತಿದ್ದಂತೆಯೇ ಗೋದಾಮಿನಲ್ಲಿರುವ ವಿವಿಧ ದಾಖಲೆಗಳನ್ನು ತಿದ್ದಿರುವ ಬಗ್ಗೆ ದಾಖಲೆ ಸಮೇತ ಪ್ರದರ್ಶಿಸಿದರು. ಅಷ್ಟೇ ಅಲ್ಲ ಕೆಲ ದಾಖಲೆಗಳನ್ನು ಬಚ್ಚಿಟ್ಟಿರುವ ಬಗ್ಗೆಯೂ ಅವರು ಸಂಶಯ ವ್ಯಕ್ತಪಡಿಸಿದರು.
ಪರವಾನಗಿ ರದ್ದು: ಈಗಾಗಲೇ ಸಿಂಧನೂರಿನಲ್ಲಿ ಪತ್ತೆಯಾದ ಅಕ್ರಮಕ್ಕೆ ಸಂಬಂಧಿಸಿ ಗೋದಾಮಿನ ಮಾಲಿಕ ಗುನ್ನೇಶ್ವರರಾವ್ ಮತ್ತು ಆಹಾರ ಧಾನ್ಯ ಸಾಗಣೆ ಗುತ್ತಿಗೆದಾರ ವೆಂಕಟೇಶ ಎಂಬುವವರ ಪರವಾನಗಿ ರದ್ದುಗೊಳಿಸಲಾಗಿದೆ. ಹಾಗೆಯೇ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾಗಿ ವಿವರಿಸಿದರು.
ಸಚಿವ ದಿನೇಶ್ ಗುಂಡೂರಾವ್, ಅಕ್ರಮಕ್ಕೆ ಸಂಬಂಧಿಸಿ ಆಹಾರ ಇಲಾಖೆಯು ಎಲ್ಲ ರೀತಿಯ ಸಹಕಾರ ನೀಡಲಿದ್ದು, ಆರೋಪಿಗಳ ಪತ್ತೆಗೆ ಬಿಗಿ ಕ್ರಮ ಅನುಸರಿಸುವಂತೆ ಸ್ಥಳದಲ್ಲಿದ್ದ ಎಸ್ಪಿ ಎಂ.ಎನ್.ನಾಗರಾಜ್ ಅವರಿಗೆ ಆದೇಶ ನೀಡಿದರು.
ಹಾಗೆಯೇ ಅನ್ನಭಾಗ್ಯ ಯೋಜನೆಯ ಅಕ್ರಮಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳು ಆಹಾರ ಇಲಾಖೆಗೆ ವರದಿಯೊಂದನ್ನು ಕಳಿಸಬೇಕು. ಅದರನುಸಾರ ಆಹಾರ ಇಲಾಖೆಯ ಮೇಲಧಿಕಾರಿಗಳಿಂದ ಇಲ್ಲವೇ ಬೇರೊಂದು ಸಂಸ್ಥೆಯಿಂದ ಅಕ್ರಮದ ಸಮಗ್ರ ತನಿಖೆಗೆ ಆದೇಶಿಸುವುದಾಗಿ ಭರವಸೆ ನೀಡಿದರು. ಅದೇ ರೀತಿ ಎಪಿಎಂಸಿ ಆವರಣದಲ್ಲಿರುವ ಆಹಾರ ಇಲಾಖೆ ಗೋದಾಮಿನ ನಿರ್ವಹಣೆ ಮಾಡುವ ಇಬ್ಬರು ಸಿಬ್ಬಂದಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳಾದ ಹರ್ಷ ಗುಪ್ತಾ, ಲತಾ ಕೃಷ್ಣರಾವ್, ಆಹಾರ ಇಲಾಖೆ ಉಪನಿರ್ದೇಶಕ ಗುರುರಾಜ ರಾವ್ ಸೇರಿ ಅನೇಕರಿದ್ದರು.