ನಾಳೆ ಎಲ್ಐಸಿ ಒಬಿಸಿ ನೌಕರರ 2ನೇ ಮಹಾಸಮ್ಮೇಳನ
ರಾಯಚೂರು: ಭಾರತೀಯ ಜೀವ ವಿಮಾ ನಿಗಮದ ಹಿಂದುಳಿದ ವರ್ಗಗಳ ನೌಕರರ 2ನೇ ಮಹಾಸಮ್ಮೇಳನವನ್ನು ನಗರದಲ್ಲಿ ನ.17ರಂದು ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಲ್ಐಸಿ ಒಬಿಸಿ ನೌಕರರ ಹಿತರಕ್ಷಣಾ ಒಕ್ಕೂಟದ ವಿಭಾಗೀಯ ಕಾರ್ಯದರ್ಶಿ ವಿಜಯಕುಮಾರ್, ನಗರದ ಎಪಿಎಂಸಿ ಆವರಣದ ಬಿ.ಆರ್.ರಾಜು ಸಭಾಂಗಣದಲ್ಲಿ ಈ ಮಹಾಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್.ಶಂಕ್ರಪ್ಪ, ಅಖಿಲ ಭಾರತ ಎಲ್ಐಸಿ ನೌಕರರ ಸಂಘದ ಅಧ್ಯಕ್ಷ ಕೆ.ವಿಶ್ವನಾಥನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ತಿಪ್ಪರಾಜು ಹವಾಲ್ದಾರ, ಮಾನಪ್ಪ ಡಿ.ವಜ್ಜಲ್, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಕೆ.ಉಷಾ, ಕೆ. ಕಮಲಕಣ್ಣನ್, ಬಿ.ಚಿನ್ನಬ್ ಭಾಯ್, ಜಿ.ನರಸಿಂಹ, ಕೆ.ಅನಂತ ಪದ್ಮನಾಭ್, ಎಂ.ವಿ.ಜೆ.ವರಪ್ರಕಾಶ, ಗಟ್ಟು ರಮೇಶ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಮೀಸಲಾತಿ ಚರ್ಚೆ: ಈ ಕಾರ್ಯಕ್ರಮದ ಮೂಲಕ ರಾಜ್ಯದ ಎಲ್ಲ ಹಿಂದುಳಿದ ವರ್ಗದ ಎಲ್ಐಸಿ ನೌಕರರನ್ನು ಒಗ್ಗೂಡಿಸಿ ಸಮಸ್ಯೆಗಳನ್ನು ಅರಿತು ಹೋರಾಟ ರೂಪಿಸಲಾಗುತ್ತದೆ. ಸಮಸ್ಯೆಗೆ ಸೂಕ್ತ ಪರಿಹಾರ ಹಾಗೂ ಸಂವಿಧಾನಿಕವಾಗಿ ನೀಡಿರುವ ಸವಲತ್ತು ಹಾಗೂ ಮೀಸಲಾತಿಯ ಬಳಕೆ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು. ಹಿಂದುಳಿದ ವರ್ಗದಲ್ಲಿ ಹಲವು ಜನರು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದರೂ, ಅದರ ದುಪ್ಪಟ್ಟು ಜನರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ನೌಕರರ ಒಕ್ಕೂಟವೂ ಹೊರತಾಗಿಲ್ಲ. ಅವರ ಹಿತರಕ್ಷಣೆಗಾಗಿ ಈ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಸಮಸ್ಯೆಗಳ ಪರಿಹಾರದ ಜತೆಗೆ ಸೌಲಭ್ಯ ಹಾಗೂ ಮೀಸಲಾತಿ ಮುಂದಿನ ಪೀಳಿಗೆಗೆ ಬಳುವಳಿ ರೂಪದಲ್ಲಿ ನೀಡುವ ಸಂಬಂಧ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.
ಒಕ್ಕೂಟದ ಸದಸ್ಯರಾದ ಗಟ್ಟು ರಮೇಶ, ಮಲ್ಲಿಕಾರ್ಜುನ, ಶ್ರೀಶೈಲ ಚಳಿಗೇರಿ, ಎಂ.ಎಸ್. ಸುಭಾಷ ಚಂದ್ರ, ಜಯಪ್ರಭು, ಜಿ. ಶ್ಯಾಮಸುಂದರ್ ಇದ್ದರು.