ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ; ಆರೋಪ
ರಾಯಚೂರು: ಹೈದ್ರಾಬಾದ್ ಕರ್ನಾಟಕಕ್ಕೆ 371(ಜೆ)ನೇ ಕಲಂ ಅಡಿ ತಿದ್ದುಪಡಿಯಾಗಿ ಕಾನೂನಿನ ರೂಪದಲ್ಲಿ ಜಾರಿಗೆ ತಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹೈ.ಕ. ಹೋರಾಟ ಸಮಿತಿಯು, ಈ ನಿಯಮ ಉಲ್ಲಂಘಿಸಿ ಸರ್ಕಾರದ ಎಂಎಸ್ಐಎಲ್ ಸಂಸ್ಥೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿರುವುದನ್ನು ಖಂಡಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿರುವ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್, ನ.12ರಂದು ಮೈಸೂರು ಮಿನರಲ್ಸ್ ಲಿಮಿಟೆಡ್ ಸಂಸ್ಥೆಯು ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ಹೈ.ಕ. ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿಪಡಿಸಿಲ್ಲ ಎಂದು ದೂರಿದ್ದಾರೆ.
ನಿಯಮ ಉಲ್ಲಂಘನೆ ಆರೋಪ: ಅದೇ ರೀತಿ ಸೊಸೈಟಿ ಫಾರ್ ಕರ್ನಾಟಕ- ಜರ್ಮನ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಕಾರ್ಮಿಕ ಇಲಾಖೆ ಹೊಸದಾಗಿ ವಿವಿದ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಅದರಲ್ಲಿಯೂ ಹೈ-ಕ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ನಿಗದಿಪಡಿಸದೇ ನಿಯಮ ಉಲ್ಲಂಘಿಸುವ ಕಾರ್ಯ ಮಾಡಲಾಗಿದೆ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಹೈ-ಕ ಭಾಗದವರಿಗೆ ವಿಶೇಷ ಮೀಸಲಾತಿ ನೀಡಲು ಅವಕಾಶ ನೀಡಿದೆ. ರಾಜ್ಯ ಸರ್ಕಾರ ಸೂಕ್ತ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೂ ಸರ್ಕಾರದ ಅಧಿಕಾರಿಗಳು ಅದನ್ನು ಉಲ್ಲಂಘಿಸಿ ನೇಮಕಾತಿ ಮಾಡುತ್ತಿರುವುದನ್ನು ಖಂಡಿಸಿರುವ ಅವರು, ಹೈ.ಕ. ಭಾಗದ ಜನತೆಗೆ ವಂಚಿಸುವ ಕಾರ್ಯ ನಡೆದಿದೆ ಎಂದು ಟೀಕಿಸಿದ್ದಾರೆ.
ಪುನಃ ಅಧಿಸೂಚನೆ ಹೊರಡಿಸಿ: ಕಾರಣ ಸರ್ಕಾರವು ಕೂಡಲೇ ಸಂವಿಧಾನಬದ್ಧವಾಗಿ ಹೈ.ಕ. ಪ್ರದೇಶದವರಿಗೆ ದೊರಕಬೇಕಾದ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು ಸಂವಿಧಾನಬದ್ಧ ಮೀಸಲಾತಿಯನ್ನು ನಿಗದಿಗೊಳಿಸಿ ಪುನಃ ಅಧಿಸೂಚನೆ ಹೊರಡಿಸಲು ಸೂಕ್ತ ಆದೇಶ ನೀಡಬೇಕೆಂದು ಆಗ್ರಹಿಸಿದ್ದಾರೆ.