ಸಂಭ್ರಮದ ಮುದಗಲ್ ಮೊಹರಂ
ಕನ್ನಡಪ್ರಭ ವಾರ್ತೆ ಟಿ ಮುದಗಲ್ ಟಿ ನ.15
ಹಿಂದು- ಮುಸ್ಲಿಮರ ಭಾವೈಕ್ಯತೆಯ ಸಂಕೇತವಾಗಿರುವ ಐತಿಹಾಸಿಕ ಪ್ರಸಿದ್ಧ ಮುದಗಲ್ನಲ್ಲಿ ಮೊಹರಂ ಹಬ್ಬಕ್ಕೆ ಶುಕ್ರವಾರ ಸಂಭ್ರಮದ ತೆರೆ ಬಿದ್ದಿತು. ರಾತ್ರಿಯಿಡೀ ದೇವರ ಮೆರವಣಿಗೆ ನೋಡಲು ಲಕ್ಷಾಂತರ ಭಕ್ತರು ಸೇರಿದ್ದರು. ದರ್ಗಾ ಮುಂದಿನ ಅಲಾವಿ ಕುಣಿಯಲ್ಲಿ ಬೆಂಕಿ ತುಳಿಯುವುದು, ದೇವರ ಪರಸ್ಪರ ಭೇಟಿಯ ಸಂದರ್ಭವನ್ನು ಜನತೆ ಭಾವುಕರಾಗಿ ನೋಡುತ್ತಿದ್ದರು.
ಐತಿಹಾಸಿಕ ಎರಡು ಸುತ್ತಿನ ಕೋಟೆಯ ಮೇಲೆ, ಖಾಸಗಿ ಕಟ್ಟಡಗಳ ಮೇಲೆ, ಕಂದಾಯ ಭವನದ ಮೇಲೆ ನಿಂತು ಹಸನ್, ಹುಸೇನ್ ದೇವರನ್ನು ಕಂಡು ಭಕ್ತರು ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ದೇವರ ಭೇಟಿ ಸಮಯದಲ್ಲಿ ಡೊಡ್ಡ ಪ್ರಮಾಣದ ತೋಪುಗಳನ್ನು ಸಿಡಿಸುವುದು, ಬಾನಂಗಳದಲ್ಲಿ ತೋಪಿನ ಸಿಡಿಮದ್ದು ಚಿತ್ತಾರವನ್ನೇ ಸೃಷ್ಟಿಸಿತ್ತು. ಮೊಹರಂ ಕೊನೆಯ ದಿನವಾಗಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಿತ್ತು.
ದೂರದ ಹೈದ್ರಾಬಾದ್, ಮುಂಬೈ, ಗೋವಾ ಸೇರಿದಂತೆ ಅನೇಕ ಕಡೆಗಳಲ್ಲಿ ನೆಲೆಸಿರುವ ಪಟ್ಟಣದ ಮುಸ್ಲಿಂ ಜನಾಂಗದವರು ಈ ಹಬ್ಬವನ್ನು ನೋಡಲು ಆಗಮಿಸಿದ್ದರು. ಸಾರ್ವಜನಿರು ನಿಲ್ಲುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಂಚಾರಕ್ಕೆ ಅಡ್ಡಿ: ಭಾರಿ ಜನಸ್ತೋಮ ಇದ್ದುದರಿಂದ ರಾಯಚೂರು- ಬಾಗಲಕೋಟ ರಸ್ತೆಯಲ್ಲಿ ಸುಮಾರು ಒಂದು ಗಂಟೆವರೆಗೆ ಸಂಚಾರ ಸ್ಥಗಿತಗೊಂಡು ವಾಹನಗಳ ಓಡಾಟವನ್ನು ನಿಲ್ಲಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಎಸ್ಪಿ ನಾಗರಾಜ, ನಿವೃತ್ತ ಡಿಐಜಿ ಟಿ.ಆರ್. ನಾಯಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಜ್ಜಬಲಿ, ಜೆಡಿಎಸ್ ಮುಖಂಡ ನಾಗಪ್ಪ ವಜ್ಜಲ್, ಡಿವೈಎಸ್ಪಿ ಅನಿತಾ ಹದ್ದಣ್ಣವರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಡಾ.ಅಯ್ಯಪ್ಪ, ಡಾ. ಈಶ್ವರ ಸವಡಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತ ನಾಗಲಾಪುರ, ಅಮೀರಬೇಗ್ ಉಸ್ತಾದ, ಸುರೇಶ ಶೇಠ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಸ್.ಆರ್. ರಸೂಲ, ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರ ಖಾನ್, ಬಿಜೆಪಿ ಅಧ್ಯಕ್ಷ ಎಸ್.ಎ. ಮುಬೀನ್ಸಾಬ, ಪಪಂ ಸದಸ್ಯರು ಸೇರಿದಂತೆ ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.