ಅನಧಿಕೃತ ಕಾರ್ಡ್; ಸಂಚಾಲಕರ ಪರವಾನಗಿ ರದ್ದು
ಕನ್ನಡಪ್ರಭ ವಾರ್ತೆ ಸಿಂಧನೂರು ನ.16
ಬೋಗಸ್ ಕಾರ್ಡ್ ಪಡಿತರ ಚೀಟಿ ವಾಪಸ್ ನೀಡಲು ಕಾಲಾವಕಾಶ ನೀಡುತ್ತೇವೆ. ಅದರೊಳಗೆ ಸಲ್ಲಿಸುವ ನ್ಯಾಯಬೆಲೆ ಅಂಗಡಿಗಳ ಸಂಚಾಲಕರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಅವಕಾಶ ನೀಡಿದರೂ ಅವ್ಯವಹಾರ ಮುಂದುವರಿಸುವ ನ್ಯಾಯಬೆಲೆ ಅಂಗಡಿ ಸಂಚಾಲಕರ ಪರವಾನಗಿ ರದ್ದುಪಡಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ ಗುಂಡೂರಾವ್ ಎಚ್ಚರಿಸಿದರು.
ರಾಯಚೂರಿನಿಂದ ಹೊಸಪೇಟೆಗೆ ತೆರಳುವ ಮಾರ್ಗಮಧ್ಯದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಬೆಲೆ ಅಂಗಡಿ ಸಂಚಾಲಕರಿಗೆ ಕಮಿಷನ್ ಹೆಚ್ಚಿಸಲಾಗಿದೆ. ಸಾರಿಗೆ ಭತ್ಯೆಯನ್ನು ನೀಡಲಾಗುತ್ತಿದೆ. ಎಲ್ಲ ರೀತಿಯ ಸಹಕಾರ ನೀಡಿದಾಗ್ಯೂ ಅವ್ಯವಹಾರ ಮಾಡಿದರೆ ಕ್ಷಮಿಸುವುದಿಲ್ಲ ಎಂದರು.
ಅರ್ಹತೆ ಆಧಾರ: ರಾಜ್ಯದಲ್ಲಿ ಹೊಸದಾಗಿ ಪಡಿತರ ಕಾರ್ಡ್‌ಗಾಗಿ 30 ಲಕ್ಷ ಅರ್ಜಿ ಬಂದಿದ್ದು ಪರಿಶೀಲನೆ ಮಾಡಿ ಅದರಲ್ಲಿ 2 ಲಕ್ಷ ಅರ್ಜಿಗಳನ್ನು ಅಂತಿಮಗೊಳಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ 1.50 ಲಕ್ಷ ಅರ್ಜಿಗಳು ಬಂದಿದ್ದು, ಈಗಾಗಲೇ 26 ಸಾವಿರ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. ನ. 30ರೊಳಗೆ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರನ್ನು ಪರಿಗಣಿಸಿ ಅರ್ಹತೆಯ ಆಧಾರದ ಮೇಲೆ ಪಡಿತರ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದರು.
ಪಡಿತರ ಧಾನ್ಯಗಳ ದುರುಪಯೋಗ ಆಗುತ್ತಿರುವುದನ್ನು ಒಪ್ಪಿಕೊಂಡ ಸಚಿವರು ಮೈಸೂರು, ಬಳ್ಳಾರಿ ಮತ್ತಿತರ ಕಡೆಗಳಲ್ಲಿ ಅವ್ಯವಹಾರಗಳು ನಡೆದಿವೆ. ತಾಲೂಕಿನಲ್ಲೂ ಅಪಾರ ಅವ್ಯವಹಾರವಾಗಿದ್ದು ಇದರಲ್ಲಿ ಭಾಗಿಯಾದ ಉಪನಿರ್ದೇಶಕರು, ವ್ಯವಸ್ಥಾಪಕರನ್ನು ಸೇವೆಯಿಂದ ಅಮಾನತು ಮಾಡಲಾಗುವುದು. ಈಗಾಗಲೇ ಸಾರಿಗೆ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಿದ್ದು, ಕ್ರಿಮಿನಲ್ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
10 ದಿನ ವಿತರಣೆ: ಕೆಲ ನ್ಯಾಯಬೆಲೆ ಅಂಗಡಿ ಸಂಚಾಲಕರು ತಿಂಗಳಲ್ಲಿ ಒಂದೆರಡು ದಿನ ಮಾತ್ರ ಆಹಾರ ಧಾನ್ಯ ವಿತರಿಸುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪಡಿತರದಾರರಿಗೆ ಅನುಕೂಲ ನೀಡುವ ಉದ್ದೇಶದಿಂದ ಪ್ರತಿ ತಿಂಗಳು 1ರಿಂದ 10ನೇ ತಾರೀಕಿನವರೆಗೆ ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಸೂಚಿಸಿದ್ದೇವೆ. ಪ್ರತಿ ತಿಂಗಳು 30ರೊಳಗಾಗಿ ಪಡಿತರ ದಾಸ್ತಾನನ್ನು ಸಂಚಾಲಕರಿಗೆ ನೀಡುತ್ತೇವೆ. ಇನ್ನು ಮುಂದೆ ಬಯೋವುಟ್ರಿಕ್ ವ್ಯವಸ್ಥೆಯಲ್ಲಿ ರಾಜ್ಯಾದ್ಯಂತ ಜಾರಿಗೆ ತರುವ ಮೂಲಕ ಪಡಿತರ ದುರುಪಯೋಗ ಆಗುವುದನ್ನು ತಪ್ಪಿಸುವ ಉದ್ದೇಶವಿದೆ ತಿಳಿಸಿದರು.