ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯ

Mainashree
Updated On : 17 Nov 2013, 10:40 am

ಸಿಂಧನೂರು: ಕಳೆದೆರಡು ದಿನದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿದ್ದ 40ನೇ ವಿತರಣಾ ಕಾಲುವೆ ರೈತರ ಟೆಂಟ್ ಬಳಿ ತೆರಳಿ ಅವರ ಸಂಕಷ್ಟಗಳನ್ನು ಆಲಿಸಿದ ಸಚಿವ ದಿನೇಶ ಗುಂಡೂರಾವ್, ಸತ್ಯಾಗ್ರಹದಲ್ಲಿ ಅಸ್ವಸ್ಥಗೊಂಡಿದ್ದವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರಿಗೆ ಎಳೆನೀರು ಕುಡಿಸಿ ಸತ್ಯಾಗ್ರಹ ಅಂತ್ಯಗೊಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗುರ್ಕಿ ಹನುಮನಗೌಡ, ಈ ಹಿಂದೆ ಸೋನಾ ಮಸೂರಿ ಬೆಳೆಯನ್ನು 'ಎ' ಗ್ರೇಡ್ ಬತ್ತವೆಂದು ಪರಿಗಣಿಸಿ ವಿಶೇಷ ಬೆಲೆ ನಿಗದಿಪಡಿಸುವಂತೆ ಮತ್ತು ರಫ್ತಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿಯೋಗ ಹೋಗಿ ಒತ್ತಾಯಿಸಲಾಗಿತ್ತು. ಪ್ರತಿವರ್ಷ ಇದೇ ರೀತಿ ರೈತರು ಹಾನಿಗೆ ಒಳಗಾಗುತ್ತಿದ್ದಾರೆ. ಕಾರಣ ತಾವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಬೆಲ ನಿಗದಿಪಡಿಸಬೇಕೆಂದು ಮನವಿ ಮಾಡಿದರು.
ರೈತರ ಗೋಳಿಗೆ ಕಿವಿಗೊಡಿ: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ರೈತರ ಗೋಳಿಗೆ ಕಿವಿಗೊಡಬೇಕು. ಕಳೆದ ವರ್ಷ 1600ಕ್ಕೆ 75 ಕೆಜಿ ಮಾರಾಟ ಮಾಡಿದ್ದಾರೆ. ಈ ಬಾರಿ 1200ಕ್ಕೆ ಕುಸಿದಿದೆ. ಹೀಗಾದರೆ ರೈತರು ಬತ್ತ ಬೆಳೆಯುವುದಾದರೂ ಹೇಗೆ, ಕಾರಣ ತಾವು ಬೆಂಬಲ ಬೆಲೆಯನ್ನು ಕನಿಷ್ಠ 2 ಸಾವಿರಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಆಸ್ಪತ್ರೆಗೆ ಭೇಟಿ: ನಂತರ ತಹಸೀಲ್ದಾರ್ ಕಚೇರಿ ಮುಂದೆ ಕುಳಿತ ಅಮರಣಾಂತ ಉಪವಾಸ ಸತ್ಯಾಗ್ರಹಿಗಳಿಗೆ ಎಳನೀರು ಕುಡಿಸಿದ ಸಚಿವರು, ಈಗಾಗಲೇ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ರೈತರಾದ ಶರಣಪ್ಪ, ಇಮಾಮ್ ಸಾಬ, ಖಾಜಾ ಪಟೇಲ್ ಅವರನ್ನು ಭೇಟಿಯಾಗಿ ಎಳ ನೀರು ಕುಡಿಸುವ ಮೂಲಕ ಅಮರಣಾಂತ ಉಪವಾಸ ಕೈಬಿಡುವಂತೆ ಮನವೊಲಿಸಿದರು.
ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ವೆಂಕನಗೌಡ ಗದ್ರಟಗಿ, ಅಶೋಕ ಉಮಲೂಟಿ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಪಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ, ಜಾಫರ್ ಜಾಗೀರದಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement