ಏಕರೂಪ, ಸಮಾನ ಶಿಕ್ಷಣ ಜಾರಿಯಾಗಲಿ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ನ.16
ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಹಾಗೂ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಜಾಗೃತಿ ಆಂದೋಲನ ನಿಮಿತ್ತ ಶನಿವಾರ ಜಾಥಾ ನಡೆಸಲಾಯಿತು.
ಪಟ್ಟಣದ ಬಸವಸಾಗರ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಬಾಲನಗೌಡ ಮತ್ತಿತರರು, ಸಂವಿಧಾನವು ಸಮಾನತೆಯನ್ನು ತನ್ನ ಮುಖ್ಯ ತತ್ವವನ್ನಾಗಿಸಿಕೊಂಡು ಇದರ ಸಾಕಾರಕ್ಕಾಗಿ ಮುಖ್ಯವಾಗಿ ಶಾಲಾ ಶಿಕ್ಷಣವನ್ನು ನೆಚ್ಚಿಕೊಂಡಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸಂವಿಧಾನದಲ್ಲಿ ಕಾಲಮಿತಿ ಕಾರ್ಯಕ್ರಮವನ್ನಾಗಿ ಸೇರಿಸಲಾಗಿದೆ. ಶಿಕ್ಷಣ ಮೂಲಭೂತ ಹಕ್ಕಾಗಿದ್ದರೂ ಶಿಕ್ಷಣ ಪದ್ಧತಿಯು ಅಸಮಾನತೆ ಹಾಗೂ ತಾರತಮ್ಯದ ಮಹಾಕೂಪವಾಗಿದೆ. ಬಡ ಮಕ್ಕಳು ಮಾತೃಭಾಷಾ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರೆ, ಶ್ರೀಮಂತರ ಮಕ್ಕಳು ಆಂಗ್ಲ ಭಾಷಾ ಮಾಧ್ಯಮದಲ್ಲಿ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಎಂದರು.
ಸಮಾನತೆ, ಸಾಮಾಜಿಕ ನ್ಯಾಯ ಅವಶ್ಯ: ಶಿಕ್ಷಣ ತಜ್ಞರು ಪ್ರತಿವಾದಿಸುವಂತೆ ಎಲ್ಲ ಮಕ್ಕಳು ತಮ್ಮ ನೆರೆಹೊರೆಯ ಸಮಾನ ಶಾಲೆಯಲ್ಲಿ ಮಾತೃಭಾಷೆಯ ಮಾಧ್ಯಮದ ಮೂಲಕ ಸಮಾನ ಗುಣಮಟ್ಟದ ಶಿಕ್ಷಣ ಪಡೆಯುವಂತಾದಾಗ ಮಾತ್ರ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸಾಕಾರಗೊಳ್ಳಲು ಸಾಧ್ಯವಾಗಲಿದೆ.
ಆದರೆ ಇಂದು ಶಿಕ್ಷಣ ಮಾರಾಟದ ವಸ್ತುವಾಗಿದ್ದು, ದಿನದಿಂದ ದಿನಕ್ಕೆ ವೇಗವಾಗಿ ಖಾಸಗೀಕರಣಗೊಳ್ಳುತ್ತಿದೆ. ನಮ್ಮನ್ನಾಳುವ ಸರ್ಕಾರಗಳ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸಮ-ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಪ್ರಮುಖ ಅಸ್ತ್ರವೆಂದು ನಂಬಿರುವ ನಾವುಗಳು ಮಾತೃಭಾಷಾ ಶಿಕ್ಷಣದ ಜಾರಿ ಜೊತೆಗೆ ಪಠ್ಯಕ್ರಮದಲ್ಲಿನ ತಾರತಮ್ಯ ತೊಡೆದು ಹಾಕಬೇಕಿದೆ ಎಂದು ಒತ್ತಾಯಿಸಿದರು.
ಜನಾಂದೋಲನ ರೂಪುಗೊಳ್ಳಲಿ: ರಾಜ್ಯದಲ್ಲಿ ಸಮ- ಸಮಾಜದ ನಿರ್ಮಾಣಕ್ಕಾಗಿ ಇಂದಿನ ಪದ್ಧತಿಯ ಎಲ್ಲ ಬಗೆಯ ತಾರತಮ್ಯಗಳನ್ನು ತೊಲಗಿಸಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಜನಾಂದೋಲನ ರೂಪಗೊಳ್ಳಬೇಕಾಗಿದೆ. ಇದನ್ನು ಮನಗಂಡು ಜಯಕರ್ನಾಟಕ ಸಂಘಟನೆ ಕಳೆದ 5 ವರ್ಷಗಳಿಂದ ನಾಡು, ನುಡಿ, ಗಡಿ, ಜಲದ ಉಳಿವಿಗಾಗಿ ನೂರಾರು ಹೋರಾಟ ಮಾಡುತ್ತಾ ಬಂದಿದ್ದು, ದೇಶದಲ್ಲಿ ನಶಿಸಿ ಹೋಗುತ್ತಿರುವ ನೂರಾರು ಭಾಷೆಗಳನ್ನು ಉಳಿಸುವುದರ ಜೊತೆಗೆ ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಮೂಲಕ ಕನ್ನಡಿಗರ ಬದುಕನ್ನು ಗಟ್ಟಿಗೊಳಿಸಬೇಕಿದೆ. ಸರ್ಕಾರ ಸಮಾನ ಶಾಲಾ ಶಿಕ್ಷಣ ನೀತಿ ರೂಪಿಸಿ ತ್ವರಿತವಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಪ್ರಟನಾ ಜಾಥಾದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಬಾಲನಗೌಡ, ಮುಖಂಡರಾದ ಶಿವಪುತ್ರ, ಹುಲಗಪ್ಪ, ಬೀರಪ್ಪ, ಅಕ್ಬರ ಬೆಂಡೋಣಿ, ತಿರುಪತಿ, ಅಯ್ಯಣ್ಣ ಯಲಗಟ್ಟ, ಸಣ್ಣ ಹನುಮಂತ, ಮುತ್ತಣ್ಣ ಕೋಡಿಹಾಳ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಇದ್ದರು.