ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾಧಿಕಾರಿ ತಾಕೀತು
ಕನ್ನಡಪ್ರಭ ವಾರ್ತೆ ಮುದಗಲ್ ನ.16
ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಶನಿವಾರ ಭೇಟಿ ನೀಡಿ ಗಣಿಗಾರಿಕೆ ಪ್ರದೇಶವನ್ನು ಪರಿಶೀಲಿಸಿದರು. ಇದರಿಂದ ಗಣಿ ಮಾಲೀಕರು ತಲ್ಲಣಗೊಂಡಿದ್ದು, ತನಿಖಾ ತಂಡ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಸರ್ಕಾರದ ಆದೇಶದ ಪ್ರಕಾರ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಅಕ್ರಮ ಗಣಿಗಾರಿಕೆ ತಡೆಯಲು ಸರ್ವೆ ಕಾರ್ಯಕ್ಕೆ ಸೂಚಿಸಿದ್ದರಿಂದ ಶನಿವಾರ ಜಿಲ್ಲಾಧಿಕಾರಿಗಳು ತನಿಖಾ ತಂಡದ ಕಾರ್ಯ ವೀಕ್ಷಣೆಗಾಗಿ ಮತ್ತು ಅಕ್ರಮ ಕಲ್ಲು ಗಣಿ ಪ್ರದೇಶವನ್ನು ಪತ್ತೆ ಹಚ್ಚಲು ರಚಿಸಲಾದ ತನಿಖಾ ತಂಡದ ಸರ್ವೆ ಕಾರ್ಯ ಹಾಗೂ ಸ್ಥಿತಿ ಗತಿಗಳನ್ನು ಅರಿಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸಮೀಕ್ಷೆ ಚುರುಕು: ಈಗಾಗಲೇ ಸರಕಾರದ ಆದೇಶದಂತೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡ ಕಾರ್ಯನಿರ್ವಹಿಸುತ್ತಿದ್ದು, ಸರ್ವೆ ಕಾರ್ಯ ಚುರುಕುಗೊಂಡಿದೆ. ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ಸುಮಾರು 2 ಗಂಟೆಗಳ ಕಾಲ ತನಿಖಾ ತಂಡದೊಂದಿಗೆ ಸಮಾಲೋಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತನಿಖಾ ತಂಡವು ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ಸರ್ವೆ ಕಾರ್ಯ ಆರಂಭಿಸಿದ್ದು, ಕೂಡಲೇ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಿ ಅಕ್ರಮ ಎಸಗಿದವರ ಮೇಲೆ ಕ್ರಮಕ್ಕೆ ಶಿಫಾರ್ಸು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಟಿ.ಯೋಗೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಿಕಂದರ್ ಭಾಷಾ, ಅರುಣ್ ಸೇರಿದಂತೆ ತನಿಖಾ ತಂಡದ ಅಧಿಕಾರಿಗಳು ಇದ್ದರು.