ಬತ್ತ ರೈತರಿಗೆ ನ್ಯಾಯ ಕಲ್ಪಿಸಲು ಯತ್ನ
ಸಿಂಧನೂರು: ಸೋನಾ ಮಸೂರಿ ಬತ್ತ ಬೆಳೆದ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು, ಸೂಕ್ತ ಬೆಂಬಲ ಬೆಲೆಯನ್ನು ಕೊಡಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ ಗುಂಡೂರಾವ್ ಭರವಸೆ ನೀಡಿದರು.
ಮಾಜಿ ಶಾಸಕ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಪ್ರಥಮವಾಗಿ ಭೇಟಿ ನೀಡಿದ ಸಚಿವರಿಗೆ ನಾಡಗೌಡರು ಈ ಭಾಗದಲ್ಲಿ ಅತಿ ಹೆಚ್ಚು ಸೋನಾ ಮಸೂರಿ ಬತ್ತವನ್ನೇ ಬೆಳೆಯುತ್ತಾರೆ. ಪ್ರತಿ ಎಕರೆಗೆ ಕನಿಷ್ಠ 30 ಸಾವಿರ ಖರ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಕೇವಲ ಪ್ರತಿ ಕ್ವಿಂಟಲ್ ಬತ್ತವನ್ನು 1600ಕ್ಕೆ ಖರೀದಿಸುವುದಾಗಿ ಹೇಳಿದೆ. ಇದರಿಂದ ರೈತರಿಗೆ 20 ಸಾವಿರ ಹಾನಿಯಾಗುತ್ತದೆ. ಕಾರಣ ತಾವು ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ರೈತರ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಲಿಂಗಪ್ಪ, ರೈತ ಮೋರ್ಚಾ ಅಧ್ಯಕ್ಷ ಮಲ್ಲನಗೌಡ ಮಾನವಿಮಡು, ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿಲಾನಿಪಾಷ, ಸದಸ್ಯರಾದ ಬಸವರಾಜ ನಾಡಗೌಡ, ಶರಣಬಸವ ಗೊರೇಬಾಳ ಇತರರು ಇದ್ದರು.