20ರಂದು ಅದ್ಧೂರಿ ಕನಕ ಜಯಂತ್ಯುತ್ಸವ
ರಾಯಚೂರು: ಜಿಲ್ಲಾ ಕುರುಬರ ಸಂಘ ಹಾಗೂ ಅದರ ವಿವಿಧ ಘಟಕಗಳು ಮತ್ತು ಜಿಲ್ಲಾಡಳಿತದಿಂದ 20ರಂದು ನಗರದಲ್ಲಿ ಕನಕದಾಸರ 526ನೇ ಜಯಂತಿ ಆಚರಿಸಲಾಗುತ್ತಿದೆ ಎಂದು ತಿಂಥಿಣಿ ಕನಕಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂಘದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅದ್ಧೂರಿಯಾಗಿ ಕನಕದಾಸರ ಜಯಂತಿಯನ್ನು ಆಚರಿಸಲು ನಿರ್ಧರಿಸಿದ್ದು, ಅದರಂತೆ ಕಾರ್ಯಕ್ರಮಗಳು ನಡೆಯಲಿವೆ. ನ.20 ರಂದು ಬೆಳಗ್ಗೆ 9.15ಕ್ಕೆ ಕನಕದಾಸರ ವೃತ್ತ ಗಂಜ್ ಸರ್ಕಲ್ನಲ್ಲಿ ಕನಕದಾಸರ ಪುತ್ಥಳಿಗೆ ಗೌರವ ಸಮರ್ಪಣೆ, ವಿಶೇಷ ಪೂಜೆ ಸಲ್ಲಿಸಿ ನಂತರ ಭಾವಚಿತ್ರದ ಮೆರವಣಿಗೆ ಆಯೋಜಿಸಿದ್ದು, ವಿವಿಧ ಜಾನಪದ ಕಲಾತಂಡಗಳು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ನಗರದ ಪ್ರಮುಖ ರಸ್ತೆಯಲ್ಲಿ ಸಾಗುವ ಮೆರವಣಿಗೆಯು ಜಯಂತ್ಯುತ್ಸವ ನಡೆಯುವ ರಂಗಮಂದಿರಕ್ಕೆ ಮಧ್ಯಾಹ್ನ 12.30ಕ್ಕೆ ಬಂದು ಸೇರಲಿದೆ. ನಂತರ ಅಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಮಟ್ಟದ ಕನಕದಾಸರ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರವಿಂದ ಕುಲಕರ್ಣಿ, ಇಂದಿರಾ, ಅಂಬಯ್ಯ ನುಲಿ, ಡಾ. ಲಕ್ಷ್ಮಿಬಾಯಿ, ಶರಣಪ್ಪ ಹಾಲಬಾವಿ, ಮಲ್ಲಿಕಾರ್ಜುನ ಹೊಸೂರು, ಅಬ್ದುಲ್ ಗೋನಾಳ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರಿಗೆ ಕನಕರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ವಿವರಿಸಿದರು.
ಸ್ಪರ್ಧೆಗಳ ವಿಜೇತರಿಗೆ ಸಮಾರಂಭದಲ್ಲಿ ಬಹುಮಾನ ನೀಡಲಾಗುತ್ತದೆ. ಜಿಲ್ಲೆಯ ಜನಪ್ರತಿನಿಧಿಗಳು, ಪ್ರಮುಖರು, ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಮುಖಂಡ ನೀಲಕಂಠ ಬೇವಿನ್ ಮಾತನಾಡಿ, ಈಚೆಗೆ ವಾಲ್ಮೀಕಿ ಜಯಂತಿ ಸಂದರ್ಭ ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದರು. ಅದರಂತೆಯೇ ಕನಕದಾಸರ ಜಯಂತಿ ಸಂದರ್ಭ ಅವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನಕಭವನ ನಿರ್ಮಾಣಕ್ಕೆ ಅನುದಾನ ಒದಗಿಸಿ ಪ್ರಕಟಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕುರುಬ ಜ್ಞಾನಾನಂದಶ್ರೀ, ಸಮಾಜದ ಪ್ರಮುಖರಾದ ಮಲ್ಲಿಕಾರ್ಜುನ ಏಗನೂರು, ಕೆ. ನಾಗರಾಜ್, ಬೀರಪ್ಪ, ಹನುಮಂತಪ್ಪ ಜಾಲಿಬೆಂಚಿ, ನಾಗೇಂದ್ರಪ್ಪ ಮಟಮಾರಿ ಇದ್ದರು.