ಜನಪದ ಸಾಹಿತ್ಯ ಜೀವಂತವಿರಿಸಿದ ಪ್ರೊ.ಲಠ್ಠೆ
ಕನ್ನಡಪ್ರಭ ವಾರ್ತೆ ಬೀದರ್ ನ.17
ಹೈದ್ರಾಬಾದ್ ಕರ್ನಾಟಕ ಅಲ್ಲದೇ ಉತ್ತರ ಕರ್ನಾಟಕದ 260 ಜಾನಪದ ಕವಿಗಳ ಪರಿಚಯದ ಕೃತಿ ರಚಿಸಿ ಸಂಪೂರ್ಣ ಕರ್ನಾಟಕದ ಚರಿತ್ರೆಯನ್ನು ಪ್ರೊ. ಎಂ.ಎಸ್. ಲಠ್ಠೆ ನಿರ್ಮಿಸಿದ್ದಾರೆ ಎಂದು ಗುಲ್ಬರ್ಗ ವಿಶ್ವ ವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ. ವೀರಣ್ಣ ದಂಡೆ ತಿಳಿಸಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ 'ಪ್ರೊ. ಎಂ.ಎಸ್. ಲಠ್ಠೆ ಅವರ ಬದುಕು-ಬರಹ' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಈ ಕೃತಿಯಿಂದಲೇ ಹೈದ್ರಾಬಾದ್-ಕರ್ನಾಟಕದ ಕವಿಗಳ ಪರಿಚಯವಾಯಿತು. ಈ ಕೃತಿಯನ್ನು ಆಧರವಾಗಿಟ್ಟುಕೊಂಡು ಒಬ್ಬೊಬ್ಬ ಕವಿಗಳ ಮೇಲೆ ಪಿ.ಎಚ್ಡಿ. ಅಧ್ಯಾಯ ನಡೆಯುತ್ತಿವೆ ಎಂದರು.
1950-60 ಸುಮಾರಿಗೆ ಗದುಗಿನ ಮಠ ಹಾಗೂ ಡಾ. ಜಿ.ಸಂ. ಪರಮೇಶ್ವರ ಜಾನಪದ ಸಾಹಿತ್ಯ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು. ಗದುಗಿನ ಮಠ ಅವರು ಕೇವಲ ಹಾಡು ಕುರಿತು, ಪರಮೇಶ್ವರ ಅವರ ಕಥೆಗಳ ಬಗ್ಗೆ ಆಸಕ್ತಿ ವಹಿಸಿದರು. 1972-73ರಲ್ಲಿ ಲಠ್ಠೆ ಅವರು ಜಾನಪದ ಸಾಹಿತ್ಯ ಸಂಗ್ರಹದ ಒಂದೇ ಸಲ 3 ಕೃತಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದರು. ತದನಂತರ ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಸ್ವಂತ ಹಣದಲ್ಲಿ 30 ಕೃತಿಗಳನ್ನು ಹೊರತಂದರು. ಸ್ವಂತ ಖರ್ಚಿನಲ್ಲಿ 30 ಕೃತಿಗಳು ರಚಿಸಿರುವವರಲ್ಲಿ ಕರ್ನಾಟಕದಲ್ಲೇ ಲಠ್ಠೆ ಮೊದಲಿಗರು ಎಂದರು.
ಪ್ರಶಸ್ತಿ: ಮೊದಲ ಹಂತದಲ್ಲಿ 5-6 ಪ್ರಕಾರದ ಜಾನಪದ ಸಾಹಿತ್ಯ ಸಂಗ್ರಹಿಸಿ ಕೃತಿಗಳು ಪ್ರಕಟಿಸಿದರು. ನಂತರ 2ನೇ ಹಂತದಲ್ಲಿ ಒಟ್ಟು 14 ಪ್ರಕಾರದ ಜಾನಪದ ಸಾಹಿತ್ಯದ ಕೃತಿಗಳನ್ನು ರಚಿಸುವುದರ ಮೂಲಕ ಇಡೀ ಕರ್ನಾಟಕ ಜಾನಪದ ಸಾಹಿತ್ಯದ ಚರಿತ್ರೆ ಪುನರ್ ರಚಿಸಿದರು. ಅದರಲ್ಲಿ “JsÚ®Úâ’ ಕೃತಿಗೆ ಸಾಹಿತ್ಯ ಆಕಾಡೆಮಿಯಿಂದ ಪ್ರಶಸ್ತಿ ಲಭಿಸಿತ್ತು. ಇದರಿಂದ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಆಸಕ್ತಿ ಹುಟ್ಟಿಸಿತ್ತು ಎಂದರು.
ಕನ್ನಡ ಜನಪದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಪ್ರೊ. ಲಠ್ಠೆ ಅವರು ಒಟ್ಟು 121 ಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಈಗ 110 ಪುಸ್ತಕಗಳನ್ನು ಲಭ್ಯವಾಗಿದೆ. ಇಂತಹ ಮಹಾನ ಸಾಧನೆಯಿಂದ ಜನಪದ ಸಾಹಿತ್ಯದ ಚರಿತ್ರೆ ಪುನಹ ರಚಿಸಿದ್ದಾರೆ ಎಂದರು.
ವಚನ ಸಾಹಿತ್ಯ: ಪ್ರೊ. ಲಠ್ಠೆ ಅವರ ಬದುಕು ಬಹಳ ಸರಳ, ಶರಣರ ಜೀವನವಾಗಿತ್ತು. ಅವರಿಗೆ ವಚನ ಸಾಹಿತ್ಯದಲ್ಲಿ ಆಸಕ್ತಿ ಇದ್ದು ಮಠಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು. ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಪ್ರೊ. ಲಠ್ಠೆ ಅವರ ಪರಿಶ್ರಮದಿಂದ ಇಂದು ನಾವೆಲ್ಲ ಜನಪದ ಸಾಹಿತ್ಯ ಹಾಗೂ ಶರಣ ಸಾಹಿತ್ಯ ನೋಡುವಂತಾಗಿದೆ. ಒಂದೊಮ್ಮೆ ಇವರು 260 ಕವಿಗಳ ಪರಿಚಯದ ಕೃತಿಗಳನ್ನು ರಚಿಸದಿದ್ದರೆ ಜಾನಪದ ಎಂಬುದು ಗೊತ್ತಾಗುತ್ತಿರಲಿಲ್ಲ ಎಂದರು.
ಲಠ್ಠೆ ಅವರು ಪರಿಚಯಿಸಿದ 260 ಕವಿಗಳ ಮೇಲೆ ಈಗಿನ ಪಿ.ಎಚ್ಡಿ. ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವುದು ಸ್ಮರಣೀಯ. ತಂದೆಯಂತೆ ಅವರ ಮಗ ರವಿ ಲಠ್ಠೆ ಅವರು 3 ಕೃತಿಗಳನ್ನು ಹೊರ ತಂದು ತಮ್ಮ ಕಾರ್ಯ ಸಾಧಿಸಿದ್ದಾರೆ ಎಂದರು.
ಉಪನ್ಯಾಸ: ಡಾ.ಸೋಮನಾಥ ಯಾಳವಾರ ಡಾ. ಲಠ್ಠೆ ಅವರ ಬದುಕು ಕುರಿತು ಉಪನ್ಯಾಸ ನೀಡಿದರು. ಡಾ. ಗುರುಲಿಂಗಪ್ಪಾ ಧಬಾಲೆ 'ಜನಪದ ಕೃತಿಗಳು' ಕುರಿತು ಉಪನ್ಯಾಸ ನೀಡಿದರು. ಪ್ರೊ.ಕಲ್ಯಾಣರಾವ್ ಪಾಟೀಲ್ ಇತರೆ ಕೃತಿಗಳು ಕುರಿತು ಮಾತನಾಡಿದರು.
ಜನಪದ ಗೀತೆ: ಜನಪದ ಕಲೆಗಳ ಪ್ರಾದೇಶಿಕ ಕೇಂದ್ರದ ಅತಿಥಿ ಉಪನ್ಯಾಸಕರಾದ ಶಂಕರ ಚೊಂಡಿ ಹಾಗೂ ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಎಸ್.ಬಿ. ಕುಚಬಾಳ ಜನಪದ ಗೀತೆ ಹಾಡಿದರು.
ಸನ್ಮಾನ: ಇದೇ ಸಂದರ್ಭ ಪ್ರೊ. ಎಂ.ಎಸ್. ಲಠ್ಠೆ ಅವರ ಧರ್ಮ ಪತ್ನಿ ಚನ್ನಾಂಬಿಕಾ ಲಠ್ಠೆ, ಪುತ್ರ ರವಿ ಲಠ್ಠೆ ದಂಪತಿಯನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಜಗನ್ನಾಥ ಹೆಬ್ಬಾಳೆ ಸ್ವಾಗತಿಸಿ, ಕುವೆಂಪು ಕನ್ನಡ ಸಂಘದ ಅಧ್ಯಕ್ಷ ಪಂಚಾಕ್ಷರಿ ಪುಣ್ಯಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಚಂದ್ರಪ್ಪ ಭತಮೂರ್ಗೆ ಹಾಗೂ ನಿಜಲಿಂಗಪ್ಪ ತಗಾರೆ ನಿರೂಪಿಸಿ, ಎಸ್.ಬಿ. ಬಿರಾದಾರ ವಂದಿಸಿದರು.