ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೆಳಗಾವಿ ಅಧಿವೇಶನದಲ್ಲಿ ಉ.ಕ. ರೈತರ ಸಮಸ್ಯೆ ಚರ್ಚೆ

Mainashree
Updated On : 18 Nov 2013, 11:14 am

ಕನ್ನಡಪ್ರಭ ವಾರ್ತೆ  ಸಿಂಧನೂರು  ನ.17
ಉತ್ತರ ಕರ್ನಾಟಕ ಭಾಗದ ಕಬ್ಬು, ಹತ್ತಿ, ಬತ್ತ, ದಾಳಿಂಬೆ ಬೆಳೆಗಾರರ ಸಮಸ್ಯೆಗಳ ಕುರಿತು ನ. 25ರಂದು ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಹೈದ್ರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ನಾಯಕರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಇವುಗಳಿಗೆ ರೈತರ ಸಮಸ್ಯೆ ಮುಖ್ಯವಾಗಿಲ್ಲ ಎಂದರು.
ಎರಡೂ ಪಕ್ಷಗಳಿಗೂ ಅಧಿಕಾರದ ಹುಚ್ಚು: ಬಿಜೆಪಿಯವರು ಮೋದಿಯನ್ನು ಜಪ ಮಾಡಿ ದೆಹಲಿ ಅಧಿಕಾರವೇರುವ ಹುಚ್ಚಿನಲ್ಲಿದ್ದರೆ, ಕಾಂಗ್ರೆಸ್‌ನವರು ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವ ಭರದಲ್ಲಿದ್ದಾರೆ. ಈ ಎರಡು ಪಕ್ಷಗಳು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿವೆ. ಇವುಗಳಿಗೆ ಜನಪರ ಕಾಳಜಿ ಇಲ್ಲದಂತಾಗಿದೆ ಎಂದು ಟೀಕಿಸಿದರು.
ದೇಶದ ರೈತರ ಬೆನ್ನೆಲುಬಾಗಿ ಕೆಲಸ ಮಾಡಿದವರು ಮಾಜಿ ಪ್ರಧಾನಿ ದೇವೇಗೌಡರು ಮಾತ್ರ. ಅವರ ಅವಧಿಯಲ್ಲಿ 10 ಸಾವಿರ ಕೋಟಿ ವೆಚ್ಚದಲ್ಲಿ ಕೃಷ್ಣಾ ಕೊಳ್ಳದ ಕಾಮಗಾರಿಗೆ ಚಾಲನೆ ಸಿಕ್ಕಿದ್ದರಿಂದ ಇಂದು ಈ ಭಾಗದಲ್ಲಿ ರೈತರು ನೀರಾವರಿ ಸೌಲಭ್ಯ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.
ರಾಯಚೂರಲ್ಲಿ ಸಮಾವೇಶ: ಬರುವ ಲೋಕಸಭಾ ಚುನಾವಣೆಯ ತಯಾರಿಗಾಗಿ ಹೈ-ಕ ಭಾಗದ ನಾಯಕರ ಸಭೆ ಕರೆಯಲಾಗಿದ್ದು, ಜೆಡಿಎಸ್‌ನ ಕೆಲ ತಪ್ಪು ನಿರ್ಧಾರಗಳಿಂದಾಗಿ ಪಕ್ಷ ಅಧಿಕಾರದಿಂದ ದೂರ ಉಳಿಯುವಂತಾಯಿತು. ಅಂತಹ ತಪ್ಪನ್ನು ಮುಂದೆ ಮಾಡದೆ ಲೋಕಸಭಾ ಚುನಾವಣೆಯನ್ನು ಎದುರಿಸುವುದಕ್ಕಾಗಿ ರಾಯಚೂರಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಬೃಹತ್ ಬೃಹತ್ ಸಮಾವೇಶವನ್ನು ಆಯೋಜಿಸಲಾಗುವುದು. ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡರು ಆಗಮಿಸುವರು ಎಂದು ತಿಳಿಸಿದರು.
ಮಾಜಿ ಕೃಷಿ ಸಚಿವ ಬಂಡೆಪ್ಪ ಖಾಶೆಂಪೂರ ಮಾತನಾಡಿ, ರೈತರಿಗೆ ಶೇ.70ರಷ್ಟು ಬೀಜಗಳಲ್ಲಿ ಸಬ್ಸಿಡಿ, ಸುವರ್ಣ ಗ್ರಾಮ ಯೋಜನೆ, ರೈತರ ಸಾಲಮನ್ನಾ ಮುಂತಾದ ಯೋಜನೆಗಳನ್ನು ರೂಪಿಸಿದವರು ಕುಮಾರಣ್ಣ. ಅವರ ಆಡಳಿತದಲ್ಲಿ ಅನೇಕ ಬೆಳೆಗಾರರಿಗಾದ ಅನ್ಯಾಯವನ್ನು ಸರಿಪಡಿಸಿ ಪರಿಹಾರ ಧನವನ್ನು ನೀಡಿದ್ದರು. ಆದರೆ ಈ ಸರ್ಕಾರ ತನ್ನ ತಪ್ಪನ್ನು ಹಾಗೂ ಲೋಪದೋಷಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಶಾದಿಭಾಗ್ಯ, ಅಹಿಂದ ಮಕ್ಕಳಿಗೆ ಪ್ರವಾಸ ಎಂಬ ಅವೈಜ್ಞಾನಿಕ ಯೋಜನೆಗಳ ಕುರಿತು ಜನರನ್ನು ಚರ್ಚೆಗೆ ಹಚ್ಚಿ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ಗಟ್ಟಿ: ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿ, ಕಾಂಗ್ರೆಸ್ ಸರ್ಕಾರ ವರ್ಗಾವಣೆಯ ಭ್ರಷ್ಟಾಚಾರದಲ್ಲಿ ತೊಡಗಿದ್ದೇ ಅದರ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ಗಟ್ಟಿಯಾಗಿದೆ. ಕಾರ್ಯಕರ್ತರು ಲೋಕಸಭೆ ಚುನಾವಣೆಯನ್ನು ಎದುರಿಸಲು ಸನ್ನದ್ಧರಾಗಬೇಕಾಗಿದೆ. ಸಂಘಟನಾತ್ಮಕ ಹೋರಾಟದಿಂದ ರಾಯಚೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತನ್ನದಾಗಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಜೆಡಿಎಸ್ ಗುಲ್ಬರ್ಗ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ಶಾಸಕರಾದ ಮಾನಪ್ಪ ವಜ್ಜಲ್, ಡಾ. ಕೆ.ಶಿವರಾಜ, ದಸಂಸ ಸಾಗರ ಬಣದ ಅಧ್ಯಕ್ಷ ಡಿ.ಜಿ. ಸಾಗರ, ಅಕ್ರಮ್‌ಖಾನ್ ಸೇಡಂ, ಉಸ್ತಾದ್ ವಾಹದ್ ಹುಸೇನ್, ಪ್ರತಾಪಗೌಡ, ಸದಲಪ್ಪ, ತಿಮ್ಮಾರೆಡ್ಡಿ ಮತ್ತಿತರ ಮುಖಂಡರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಯೂಸುಫ್‌ಖಾನ್, ವೆಂಕಟಪ್ಪ ನಾಯಕ ಮತ್ತಿತರರು ಇದ್ದರು.
ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಶಿವಶಂಕರ ವಕೀಲರು ನಿರೂಪಿಸಿದರು. ಆರು ಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement