ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಾಲಯದಲ್ಲಿ ತುಂಗಾರತಿ ಸಂಭ್ರಮ

Mainashree
Updated On : 18 Nov 2013, 11:16 am

ರಾಯಚೂರು: ಪವಿತ್ರ ನದಿ ತುಂಗಭದ್ರಾ ತಟದಲ್ಲಿ ಹತ್ತು ಹಲವು ಪುಣ್ಯಕ್ಷೇತ್ರಗಳಿವೆ. ಅಂಥ ಕ್ಷೇತ್ರಗಳ ಪೈಕಿ ಮಂತ್ರಾಲಯವೂ ಮಹತ್ವದ ಹಾಗೂ ಪ್ರಸಿದ್ಧ ಕ್ಷೇತ್ರ. ಇಂಥ ರಾಯರ ಕ್ಷೇತ್ರದಲ್ಲಿ ನಡೆಯುತ್ತಿರುವ ತುಂಗಾರತಿಯು ಸರ್ವಜಾತಿ, ಜನಾಂಗದವರಿಗೆ ಹಾಗೂ ಜಗತ್ತಿಗೆ ಸನ್ಮಂಗಳ ಉಂಟು ಮಾಡಲೆಂದು ಮಂತ್ರಾಲಯ ಮಠದ ಪೀಠಾಧಪತಿ ಸುಯತೀಂದ್ರಶ್ರೀ ಅನುಗ್ರಹಿಸಿದರು.
ಮಂತ್ರಾಲಯದಲ್ಲಿ ಭಾನುವಾರ ಸಂಜೆ ನಡೆದ ಪುಣ್ಯನದಿಗೆ ಆರತಿ- ತುಂಗಾರತಿ ಕಾರ್ಯಕ್ರಮದಲ್ಲಿ ತುಂಗಭದ್ರಾ ನದಿಗೆ ಪೂಜೆ ನೆರವೇರಿಸಿ, ಆರತಿ ಸಲ್ಲಿಸಿ ನಂತರ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು. ಗುರುರಾಘವೇಂದ್ರರ ಪವಿತ್ರ ಕ್ಷೇತ್ರಕ್ಕೆ ಆಗಮಿಸುವ ಎಲ್ಲರೂ ಪುಣ್ಯವಂತರು. ಪರಮಾತ್ಮನ ಅನುಗ್ರಹದಿಂದ ಮಾತ್ರ ಬದುಕಿನಲ್ಲಿ ಎಲ್ಲವೂ ಸುಲಲಿತವಾಗಿ ನಡೆಯಲು ಸಾಧ್ಯ ಎಂದು ಹೇಳಿದರು.
ಎಲ್ಲರಿಗೂ ಒಳ್ಳೆಯದನ್ನೇ ತರಲಿ: ತುಂಗಾರತಿ ಕಾರ್ಯಕ್ರಮದಿಂದ ಸಮಾಜದಲ್ಲಿನ ಎಲ್ಲ ಕಷ್ಟ ಕಾರ್ಪಣ್ಯಗಳು ಕಳೆದು ಎಲ್ಲೆಡೆ ಸುಖ, ಶಾಂತಿ, ಸಮೃದ್ಧಿ ತುಂಬಲಿ ಎಂದು ಹಾರೈಸಿದ ಶ್ರೀಗಳು, ಮಂತ್ರಾಲಯ ಶ್ರೀಕ್ಷೇತ್ರದಲ್ಲಿ ಪ್ರತಿವರ್ಷ ತುಂಗಾರತಿ ನಡೆದು ಎಲ್ಲರಿಗೂ ಒಳ್ಳೆಯದನ್ನೇ ತರಲೆಂದು ಆಶೀರ್ವದಿಸಿದರು.
ಕಿರಿಯ ಶ್ರೀ ಸುಬುಧೇಂದ್ರ ತೀರ್ಥರು ಅನುಗ್ರಹ ನೀಡಿ, ಹರಿದಾಸರು ರಾಯರರಿರುವ ಮಂತ್ರಾಲಯ ಕ್ಷೇತ್ರವನ್ನು ವೈಕುಂಠಕ್ಕಿಂತ ಮಿಗಿಲಾದುದು ಎಂದಿದ್ದಾರೆ. ಇಂಥ ಪವಿತ್ರ ಕ್ಷೇತ್ರದಲ್ಲಿ ನಡೆಯುವ ತುಂಗಾರತಿ ಕಾರ್ಯಕ್ರಮ ತಮ್ಮ ಗುರುಗಳ ಕನಸಾಗಿದೆ. ಅದನ್ನು ಸಾಕಾರಗೊಳಿಸುವ ಮೂಲಕ ಎಲ್ಲರ ಬದುಕಿನ ಅಂಧಕಾರ ಕಳೆದು ಎಲ್ಲೆಡೆ ಬೆಳಕು ಮೂಡಲಿ ಎಂದು ಹಾರೈಸಿದರು.
ನದಿಗಳಿಗೆ ಆರತಿ ಮೂಲಕ ಭಕ್ತಿ: ಪವಿತ್ರ ನದಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಎಲ್ಲರ ಬದುಕು ಹಸನಾಗಿರಿಸುವಂತೆ ಕೋರುವುದು ಕಾರ್ಯಕ್ರಮದ ಉದ್ದೇಶ. ಮಂತ್ರಾಲಯದಂತೆ ಶ್ರೀಶೈಲಂ ಸೇರಿ ಆಂಧ್ರದ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿರುವ ನದಿಗಳಿಗೆ ಆರತಿ ಮೂಲಕ ಭಕ್ತಿ ಸಮರ್ಪಿಸಲಾಗುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ. ಕೃಷ್ಣಭಟ್, ಮಠದ ಹೆಚ್ಚುವರಿ ಆಪ್ತಕಾರ್ಯದರ್ಶಿ ಸುಯಮೀಂದ್ರಾ, ವ್ಯವಸ್ಥಾಪಕ ಶ್ರೀಪತಿ, ಮಾಧವಶೆಟ್ಟಿ ಸೇರಿದಂತೆ ಮಠದ ವಿದ್ವಾಂಸರು, ಪಂಡಿತರು, ಅರ್ಚಕರು ಉಪಸ್ಥಿತರಿದ್ದರು.
ಬೃಂದಾವನಕ್ಕೆ ವಿಶೇಷ ಪೂಜೆ: ಇದಕ್ಕೂ ಮೊದಲು ಮಠದಲ್ಲಿ ಕಾರ್ತಿಕ ಹುಣ್ಣಿಮೆ ಅಂಗವಾಗಿ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಸಂಜೆ ತುಂಗಭದ್ರಾ ನದಿ ತೀರದವರೆಗೆ ಉಭಯ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ನಂತರ ಶ್ರೀಗಳು ತುಂಗಭದ್ರಾ ನದಿಗೆ ಪೂಜೆ ಸಲ್ಲಿಸಿ ಆರತಿ ನೆರವೇರಿಸಿದರು. ಆನಂತರ ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರು ತುಂಗಭದ್ರಾ ನದಿಯಲ್ಲಿ ದೀಪಗಳನ್ನು ತೇಲಿಬಿಟ್ಟರು.
ವಿವಿಧ ಭಜನಾ ಮಂಡಳಿಗಳು, ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಾಣಬಿರುಸು ಪ್ರದರ್ಶನವೂ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement