ವಾರ್ಡ್ ಸಭೆಗಳ ಮೂಲಕ ಖಾತ್ರಿ ಕಾಮಗಾರಿಗಳ ಆಯ್ಕೆ
ಮುದಗಲ್: ಪಟ್ಟಣ ಸಮೀಪದ ನಾಗಲಾಪುರ ಗ್ರಾ.ಪಂ. ಕಾರ್ಯಲಯದಲ್ಲಿ ಶನಿವಾರ ಸಾಮಾನ್ಯ ಸಭೆ ಜರುಗಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚನ್ನಮಲ್ಲಯ್ಯ ಸ್ವಾಮಿ ಕನ್ನಾಳ ಮಾತನಾಡಿ, ರಾಜ್ಯ ಸರ್ಕಾರದ ಸೂಚನೆಯಂತೆ 2014-15ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಆಯ್ದುಕೊಳ್ಳಲು ಮೊದಲು ಚುನಾಯಿತ ಸದಸ್ಯರು ತಮ್ಮ ಕ್ಷೇತ್ರದಲ್ಲಿ ವಾರ್ಡ್ ಸಭೆಗಳನ್ನು ನಡೆಸುವ ಮೂಲಕ ಕಾಮಗಾರಿ ಗುರ್ತಿಸರಿಸಬೇಕಾಗಿದೆ ಎಂದರು.
ಇಲಾಖೆಯಿಂದ ಗ್ರಾಪಂ ಸದಸ್ಯರಿಗೆ ಕಾಮಗಾರಿ ನಮೂದಿಸುವ ಖಾಲಿ ಪುಸ್ತಕ ವಿತರಿಸಲಾಗಿದೆ. ನಿಗದಿತ ಸಮಯದಲ್ಲಿ ವಾರ್ಡ್ ಸಭೆ ನಡೆಸಿ ಭರ್ತಿ ಮಾಡಿದ ಪುಸ್ತಕಗಳನ್ನು ಗ್ರಾಪಂಗೆ ಮರಳಿಸುವ ಜವಾಬ್ದಾರಿ ಗ್ರಾ.ಪಂ. ಸದಸ್ಯರ ಮೇಲಿದೆ ಎಂದರು.
ಗ್ರಾಪಂ ಸದಸ್ಯ ಆದೇಶ ನಾಯಕ (ಆದಪ್ಪ) ಲಿಂಗಸ್ಗೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿರುವ ಕಾರಣ ಗ್ರಾಪಂ ಆಡಳಿತ ವತಿಯಿಂದ ಸಭೆ ನಂತರ ಸನ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯ ಹನಮಪ್ಪ ಭೋವಿ ಉಳಿಮೇಶ್ವರ ಅನಾರೋಗ್ಯದಿಂದಾಗಿ ಮೃತಪಟ್ಟಿರುವ ಕಾರಣ ಗ್ರಾಪಂ ಸಭೆಯಲ್ಲಿ 2 ನಿಮಿಷಗಳ ಕಾಲ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು. ಗ್ರಾಪಂ ಅಧ್ಯಕ್ಷೆ ಅನಸೂಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸೋಮಶೇಖರ, ವಿಜಯ, ಅಮರಪ್ಪ ಗಡಾದ್, ಲಾಲಪ್ಪ ನಾಯ್ಕ, ಮಾಳಮ್ಮ, ಲಕ್ಷ್ಮವ್ವ, ಗ್ರಾಪಂ ಲೆಕ್ಕಿಗ ಮಲ್ಲಿಕಾರ್ಜುನ ಇತರರಿದ್ದರು.