ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 5,059!
ಲಿಂಗಸ್ಗೂರು: ಬರುವ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣದಿಂದ ವಂಚಿತರಾದ 6- 16 ವಯಸ್ಸಿನ ಮಕ್ಕಳ ಹಾಜರಾತಿ, ದಾಖಲಾತಿ, ಹಾಜರಾತಿ ಹಾಗೂ ಕಡ್ಡಾಯವಾಗಿ ಶಿಕ್ಷಣ ಪಡೆಯುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡ ಮಕ್ಕಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ತಾಲೂಕಿನ ಸಮೀಕ್ಷೆಯಲ್ಲಿ ಒಟ್ಟು 5,059 ಮಕ್ಕಳು ಪತ್ತೆಯಾಗಿದ್ದಾರೆ.
2011- 12, 2012- 13 ಮತ್ತು 2013- 14ನೇ ಸಾಲಿನ ದಾಖಲಾತಿ ವಿವರ, ವರ್ಗಾವಣೆ ಪ್ರಮಾಣ ಪತ್ರ ಪಡೆದು ಶಾಲೆ ಬಿಟ್ಟ ಮಕ್ಕಳು, ಪ್ರಸ್ತುತ ಶಾಲೆಯ ಹಾಜರಾತಿ ಸೇರಿದಂತೆ ಸಮಗ್ರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಯಿತು.
ಪಟ್ಟಣದ ಪುರಸಭೆ ವ್ಯಾಪ್ತಿಯ ಲಿಂಗಸ್ಗೂರು, ಕರಡಕಲ್, ಕಸಬಾಲಿಂಗಸ್ಗೂರು ಶಾಲೆಗಳಿಗೆ ಮೂವರು ಸದಸ್ಯರನ್ನೊಳಗೊಂಡ 17 ತಂಡಗಳನ್ನು ರಚಿಸಲಾಗಿತ್ತು. ಅದರಂತೆ ತಾಲೂಕಿನ ಎಲ್ಲ ಶಾಲೆಗಳ ಸಮೀಕ್ಷೆ ಕಾರ್ಯಕ್ಕೆ ಇಬ್ಬರು ಶಿಕ್ಷಕರು, ಒಬ್ಬ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಂಘಸಂಸ್ಥೆಯ ಪ್ರತಿನಿಧಿಗಳನ್ನೊಳಗೊಂಡ 394 ತಂಡಗಳನ್ನು ರಚಿಸಲಾಗಿತ್ತು.
ಎಲ್ಲೆಲ್ಲಿ ಸಮೀಕ್ಷೆ ಕಾರ್ಯ?: ಲಿಂಗಸ್ಗೂರು ನಗರ, ಗ್ರಾಮೀಣ ಮತ್ತು ಕಾಳಾಪುರ, ಗುಂತಗೋಳ, ದೇವರಭೂಪೂರ, ಗುರುಗುಂಟ, ಮಾವಿನಭಾವಿ, ಗೌಡೂರು, ಹಟ್ಟಿ, ವೀರಾಪೂರ, ಸಂತೆಕಲ್ಲೂರು, ಮಸ್ಕಿ, ಮೆದಕಿನಾಳ, ಮಾರಲದಿನ್ನಿ, ಕನ್ನಾಳ, ತಲೆಖಾನ್, ಮುದಗಲ್, ಆಮದಿಹಾಳ ಸೇರಿದಂತೆ ತಾಲೂಕಿನ ಒಟ್ಟು 25 ಬ್ಲಾಕ್ ಮಟ್ಟದಲ್ಲಿ ಎಲ್ಲ ಶಾಲೆಗಳ ಸಮೀಕ್ಷೆ ಕಾರ್ಯ ನಡೆಸಲಾಯಿತು.
ಶಾಲೆ ಬಿಟ್ಟ ಮಕ್ಕಳ ಸಂಖ್ಯೆ: 2011- 12, 2012-13ನೇ ಸಾಲಿನಲ್ಲಿ ವರ್ಗಾವಣೆ ಪ್ರಮಾಣ ಪತ್ರ ಪಡೆದು ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 9,485. ಅದೇ ರೀತಿ 2011- 12 ಮತ್ತು 2012- 13ನೇ ಸಾಲಿನಲ್ಲಿ ವರ್ಗಾವಣೆ ಪ್ರಮಾಣ ಪತ್ರ ಪಡೆದು ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 2,882 ಹಾಗೂ 2012- 13 ಮತ್ತು 2013-14ನೇ ಸಾಲಿನಲ್ಲಿ ವರ್ಗಾವಣೆ ಪ್ರಮಾಣ ಪತ್ರ ಪಡೆದು ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 2,177 ಮಕ್ಕಳು ಪತ್ತೆಯಾಗಿರುತ್ತಾರೆ.
ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಲಿಸುವ ನಿಟ್ಟಿನಲ್ಲಿ ಶಾಲಾ ಸಮೀಕ್ಷೆ ಕಾರ್ಯದ ನಂತರ ಕುಟುಂಬ ಸಮೀಕ್ಷೆ ಕಾರ್ಯ ಆರಂಭಿಸಲಾಗಿದ್ದು, ಈ ಕಾರ್ಯದಲ್ಲಿ ಪ್ರತಿ ಮಗುವಿನ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಕಡ್ಡಾಯ ಶಿಕ್ಷಣ ಜಾರಿಗೊಳಿಸುವ ಉದ್ದೇಶದಿಂದ ಇಲಾಖೆ ಶ್ರಮಿಸುತ್ತಿದೆ.