ಸೀಮಿನಾಗನಾಥ ಜಾತ್ರೆ ಸಂಭ್ರಮ
ಹುಮನಾಬಾದ್: ಸೀಮಿ ನಾಗನಾಥ ದೇವರ ಜಾತ್ರಾ ಮಹೋತ್ಸವವು ಭಕ್ತಿ ಭಾವಗಳ ಮಧ್ಯೆ ಸಂಭ್ರಮದಿಂದ ಜರುಗಿತು.
ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಸೀಮಿ ನಾಗನಾಥ ದೇವರ ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಹಲವು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಲಕ್ಷಾಂತರ ಜನರು ಹುಣ್ಣಿಮೆಯಂದು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಭಕ್ತಾದಿಗಳ ಸಾಲು: ಇಷ್ಟಾರ್ಥಗಳು ಈಡೇರುವುದು ಎನ್ನುವ ಅಚಲವಾದ ನಂಬಿಕೆ ಇಟ್ಟುಕೊಂಡು ದೇವಸ್ಥಾನಕ್ಕೆ ಆಗಮಿಸುವುದು ಸಾಮಾನ್ಯ. ಶನಿವಾರ ಬೆಳಗ್ಗೆ ದೇವರಿಗೆ ವಿಶೇಷ ಪೂಜೆಯ ನಂತರ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳ ಭಕ್ತಾದಿಗಳು ಸಾಲುಗಟ್ಟಲೇ ನಿಂತು ದೇವರ ದರ್ಶನ ಪಡೆದರು.ಜಾತ್ರಾ ಮಹೋತ್ಸವ ಸಮಿತಿಯಿಂದ ಭಕ್ತರ ಮನಸ್ಸಿಗೆ ನೆಮ್ಮದಿ ನೀಡಲು ಸಂಗೀತ ಕಾರ್ಯಕ್ರಮ ಜರುಗಿತು. ಗುಲ್ಬರ್ಗ ಹಾಗೂ ಬೀದರ್ ಜಿಲ್ಲೆಯ ಹೆಸರಾಂತ ಕಲಾವಿದರು ಸಂಗೀತ ಸೇವೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದರು.
ಪಲ್ಲಕ್ಕಿ ಮೆರವಣಿಗೆ: ಮಧ್ಯರಾತ್ರಿ ಕೊರೆಯುವ ಚಳಿ ಲೆಕ್ಕಿಸದೆ ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಸೀಮಿನಾಗನಾಥ ದೇವಸ್ಥಾನದಿಂದ ಶನಿವಾರ ಸಂಜೆ ಆರಂಭವಾದ ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯೆರಾತ್ರಿ ನಂತರ ಥೇರ ಮೈದಾನಕ್ಕೆ ಬಂದು ನಂತರ ರಥೋತ್ಸವ ಜರುಗಿತು.
ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಸಂದರ್ಭದಲ್ಲಿ ಮುತ್ತಿನ ಪಲ್ಲಕ್ಕಿ, ಡೊಳ್ಳು ಕುಣಿತ, ವಾದ್ಯ ಮೇಳ ಜನಮನ ಸೆಳೆಯಿತು. ನಂತರ ಬಣ್ಣಬಣ್ಣದ ಸಿಡಿಮದ್ದುಗಳು ಆಕರ್ಷಣೀಯವಾಗಿದ್ದವು.
ಜಂಗಿ ಕುಸ್ತಿ: ಭಾನುವಾರ ಬೆಳಗ್ಗೆ ನಡೆದ ಜಂಗೀ ಕುಸ್ತಿ ಸ್ಪರ್ಧೆಯಲ್ಲಿ ಖ್ಯಾತ ಪೈಲ್ವಾನರು ಭಾಗವಹಿಸಿದರು. ಸಂಜೆವರೆಗೂ ನಡೆದ ಜಂಗಿ ಕುಸ್ತಿ ವೀಕ್ಷಿಸಿದ ಕುಸ್ತಿ ಆಸಕ್ತರ ರೋಮಾಂಚನಗೊಳಿಸಿತ್ತು. ಸ್ಪರ್ಧೆಯಲ್ಲಿ ದೆಹಲಿಯ ಚೋಟುಲಾಲ್ ಪ್ರಥಮ ಬಹುಮಾನ 11 ಸಾವಿರ, ನಾಂದೆಡದ ದಿಲೀಪಸಿಂಗ್ ದ್ವಿತೀಯ ಬಹುಮಾನ 6 ಸಾವಿರ, ಪರಭಾಣಿಯ ಪ್ರವೀಣ ಜಾಧವ ತೃತೀಯ ಬಹುಮಾನ 5 ಸಾವಿರ, ಔರಾಂಗಬಾದನ ಶಕೀಲ್ ನಾಲ್ಕನೇ ಬಹುಮಾನ 3 ಸಾವಿರ ಪಡೆದುಕೊಂಡಿದ್ದು, ಅದರಂತೆ ಉಳಿದ ಪಟುಗಳಿಗೆ ಸಮಾಧಾನಕರ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಡಿವೈಎಸ್ಪಿ ಅಮರನಾಥರೆಡ್ಡಿ ನೇತೃತ್ವದಲ್ಲಿ, ಸಿಪಿಐ ಅನೀಲಕುಮಾರ, ಪಿಎಸ್‌ಐ ಶರಣಬಸಪ್ಪ ಕೋಡ್ಲಾ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ.