ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

24ರಂದು ಕರವೇ ಸ್ವಾಭಿಮಾನಿ ಕನ್ನಡಿಗರ ಜಾತ್ರೆ

Rashmi Kasaragodu
Updated On : 19 Nov 2013, 12:18 pm

ಕನ್ನಡಪ್ರಭ ವಾರ್ತೆ  ರಾಯಚೂರು  ನ.18
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ನ. 24ರಂದು ಸ್ವಾಭಿಮಾನಿ ಕನ್ನಡಿಗರ ಜಾತ್ರೆ, ಅದೇ ದಿನ ಸಂಜೆ ಲಿಂಗಸ್ಗೂರು ತಾಲೂಕಿನ ಹಟ್ಟಿಯಲ್ಲಿ ಸ್ವಾಭಿಮಾನಿ ಕನ್ನಡಿಗರ ಹಬ್ಬ ಆಯೋಜಿಸಲಾಗಿದೆ ಎಂದು ಸಂಘಟನೆಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್ ತಿಳಿಸಿದರು.
ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.24ರಂದು ನಗರದ ರಂಗಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ಜಿಲ್ಲಾ ಹಾಗೂ ರಾಯಚೂರು ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಮಾರಂಭ ಆಯೋಜಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಚಾಲನೆ: ನ. 24ರಂದು ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಚಾಲನೆ ನೀಡಲಿದ್ದಾರೆ. ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಜ್ಯೋತಿ ಬೆಳಗುವರು. ಶಾಸಕ ಡಾ. ಶಿವರಾಜ್ ಪಾಟೀಲ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆಂದು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪ, ನಗರಸಭೆ ಅಧ್ಯಕ್ಷೆ ಮಹಾದೇವಮ್ಮ, ಮಾಜಿ ಶಾಸಕ ಸೈಯದ್ ಯಾಸೀನ್, ಜಿಪಂ ಮಾಜಿ ಸದಸ್ಯ ಬಷೀರುದ್ದೀನ್, ನಗರಸಭೆಯ ಹಿರಿಯ ಸದಸ್ಯ ಮಾರೆಪ್ಪ ವಕೀಲರು, ಪಾರಸಮಲ್ ಸುಖಾಣಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಬಹುಮಾನ ವಿತರಣೆ, ಸತ್ಕಾರ: ಈ ವೇಳೆ ಕನ್ನಡ ನಾಡಿನ ಕುರಿತು ಆಯೋಜಿಸುವ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಹಾಗೆಯೇ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದ ಅವರು, ನ. 24ರಂದು ಸಂಜೆ ಲಿಂಗಸ್ಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಬಂಧ ಸ್ಪರ್ಧೆ: ರಾಜ್ಯೋತ್ಸವದ ಅಂಗವಾಗಿ ನಗರದ 10ನೇ ತರಗತಿ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ನಾಡು- ನುಡಿಯ ರಕ್ಷಣೆಯಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು, ಚಾಲುಕ್ಯ ಕೆರಿಯರ್ ಅಕಾಡೆಮಿ ಈ ಸ್ಪರ್ಧೆಯ ಹೊಣೆ ಹೊತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನ.19ರೊಳಗೆ ತಮ್ಮ ಹೆಸರುಗಳನ್ನು ಸಂಘಟನೆಯಲ್ಲಿ ನೋಂದಾಯಿಸಿಕೊಳ್ಳಬೇಕು. ನ.20 ರಂದು ಪ್ರಬಂಧ ಸ್ಪರ್ಧೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದ್ದು, ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ರಂಗಮಂದಿರದಲ್ಲಿ ನ.24ರಂದು ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಗಮೇಶ ಮಂಗಾನವರ್ ಅವರನ್ನು ದೂರವಾಣಿ ಸಂಖ್ಯೆ 9986107089, 9880589551 ಇಲ್ಲಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಅವರು ಮನವಿ ಮಾಡಿ ಕನ್ನಡಗರ ಜಾತ್ರೆ ಮತ್ತು ಕನ್ನಡಿಗರ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.
ಈ ಸಂದರ್ಭದಲ್ಲಿ ಕರವೇ ಸಂಘಟನೆಯ ಪ್ರಮುಖರಾದ ಸಂಗಮೇಶ ಮಂಗಾನವರ್, ಖಲೀಲ್ ಪಾಷಾ ಸೇರಿ ಅನೇಕರಿದ್ದರು.


ಹಟ್ಟಿಯಲ್ಲೂ ಸ್ವಾಭಿಮಾನಿ ಕನ್ನಡಿಗರ ಹಬ್ಬ


ಹಟ್ಟಿ ಪಟ್ಟಣದಲ್ಲಿ ನಡೆಯುವ ಸ್ವಾಭಿಮಾನಿ ಕನ್ನಡಿಗರ ಹಬ್ಬವನ್ನು ಜಿಪಂ ಸದಸ್ಯ ಭೂಪನಗೌಡ ಕರಡಕಲ್ ಉದ್ಘಾಟಿಸಲಿದ್ದಾರೆ. ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷತೆ ವಹಿಸುವರು. ಗ್ರಾಪಂ ಸದಸ್ಯ ಜೆ.ಸುಭಾನ್, ಅರಕೇರಾ ಜಿಪಂ ಸದಸ್ಯ ದಾನಪ್ಪ ಆಲ್ಕೋಡ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ರಾಯಚೂರು ನಗರ ಮತ್ತು ಲಿಂಗಸ್ಗೂರು ತಾಲೂಕಿನ ಹಟ್ಟಿಯಲ್ಲಿ ನಡೆಯುವ ಕನ್ನಡಿಗರಹ ಹಬ್ಬ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು ಹಾಸ್ಯ ಕಲಾವಿದರು, ನೃತ್ಯ ತಂಡಗಳಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ನ.25ರಂದು ಲಿಂಗಸ್ಗೂರು ಘಟಕದಿಂದ ಲಿಂಗಸ್ಗೂರು ಪಟ್ಟಣದಲ್ಲಿ ಸ್ವಾಭಿಮಾನಿ ಕನ್ನಡಿಗರ ಉತ್ಸವ ಆಯೋಜಿಸಿದ್ದು ಸಹಾಯಕ ಆಯುಕ್ತ ಯೋಗೀಶ್ ಚಾಲನೆ ನೀಡಲಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement