6500 ಬೆಂಬೆಲೆಗೆ ಹತ್ತಿ ಖರೀದಿಸಿ
ಕ.ಪ್ರ.ವಾರ್ತೆ ರಾಯಚೂರು ನ.18
ಹತ್ತಿ ಬೆಳೆಗೆ 6,500 ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಜಿಲ್ಲಾ ಹತ್ತಿ ಬೆಳೆಗಾರರ ಪಕ್ಷಾತೀತ ರೈತರ ಹೋರಾಟ ಸಮಿತಿಯ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ರೈತರು ಗುಣಮಟ್ಟದ ಹತ್ತಿ ಬೆಳೆಯುತ್ತಿದ್ದು ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆಯಿಲ್ಲವಾಗಿದೆ ಎಂದು ಆರೋಪಿಸಿದರು.
ಆರ್ಥಿಕ ಸಂಕಷ್ಟದಲ್ಲಿ ರೈತರು: ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ಹತ್ತಿ ದರದಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಾಲ ಮಾಡಿ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಸದ್ಯ 4,500 ಪ್ರತಿ ಕ್ವಿಂಟಾಲ್ ದರವಿದೆ. ಈ ದರದಲ್ಲಿ ಮಾರಾಟ ಮಾಡುವುದರಿಂದ ರೈತರಿಗೆ ನಷ್ಟವಾಗಲಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಹತ್ತಿಗೆ ಪ್ರತಿ ಕ್ವಿಂಟಲ್ಗೆ 6,500 ದರ ನಿಗದಿ ಮಾಡಬೇಕು. ಹತ್ತಿಯನ್ನು ಸರ್ಕಾರವೇ ಬೆಂಬಲ ಬೆಲೆಯಲ್ಲಿ ಖರೀದಿಸಲು ಮುಂದಾಗಬೇಕು. ಸದ್ಯ ಹುಬ್ಬಳ್ಳಿಯಲ್ಲಿರುವ ಭಾರತೀಯ ಹತ್ತಿ ನಿಗಮದ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಪ್ರತಿ ಎಕರೆಗೆ 30 ಸಾವಿರ ಖರ್ಚು: ರೈತರಿಂದ ಹತ್ತಿಯನ್ನು ಎಪಿಎಂಸಿಯವರು ಖರೀದಿಸಬೇಕು. ಟೆಂಡರ್ ಮೂಲಕವೇ ಹತ್ತಿ ಖರೀದಿ ಪ್ರಕ್ರಿಯೆ ನಡೆಯಬೇಕು. ಕೇಂದ್ರ ಸರ್ಕಾರ ರೈತರು ಬೆಳೆದ ಹತ್ತಿಯನ್ನು ವೈಜ್ಞಾನಿಕ ಬೆಲೆಯಲ್ಲಿ ಖರೀದಿಸಲು ಕ್ರಮ ಕೈಗೊಳ್ಳಬೇಕು. ಸದ್ಯ ರೈತರು ಹತ್ತಿ ಬೆಳೆಯಲು ಪ್ರತಿ ಎಕರೆಗೆ 25- 30 ಸಾವಿರ ವೆಚ್ಚ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಂಬಲ ಬೆಲೆಯಿಲ್ಲವಾಗಿದೆ ಎಂದು ಆರೋಪಿಸಿದರು.
ರೈತರು ಮತ್ತಷ್ಟು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕುವ ಮೊದಲು ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ರೈತರ ಹಿತಕಾಯುವ ನಿಟ್ಟಿನಲ್ಲಿ ಜಿಲ್ಲೆಯ ಹತ್ತಿ ಬೆಳೆಗಾರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಚಾಗಲ ಮಲ್ಲಿಕಾರ್ಜುನಗೌಡ, ಉರುಕುಂದಪ್ಪ ನಾಯಕ, ವೀರನಗೌಡ, ಕೆ.ನಾರಾಯಣ ವಕೀಲರು, ತಿಮ್ಮಪ್ಪ ಸಾಹುಕಾರ್, ನಾಗನಗೌಡ ಮಟಮಾರಿ, ನಾಗೇಂದ್ರಪ್ಪ ಮಟಮಾರಿ, ನಿಜಾಮುದ್ದೀನ್, ವೆಂಕೋಬರಾವ್ ಪಟವಾರಿ ಸೇರಿ ಅನೇಕರಿದ್ದರು.