ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಅನ್ನಭಾಗ್ಯ' ಅಕ್ರಮಕ್ಕೆ ಅಧಿಕಾರಿಗಳ ತಲೆದಂಡ

Rashmi Kasaragodu
Updated On : 19 Nov 2013, 12:20 pm

 ಜಗನ್ನಾಥ ಆರ್. ದೇಸಾಯಿ
ಕನ್ನಡಪ್ರಭ ವಾರ್ತೆ  ರಾಯಚೂರು  ನ.18
ಸರ್ಕಾರದ ಮಹಾತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ನಡೆದ ಅಕ್ರಮಕ್ಕೆ ಕೊನೆಗೂ ಅಧಿಕಾರಿಗಳ ತಲೆದಂಡವಾಗಿದೆ.
ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಆಹಾರ ಸಚಿವ ದಿನೇಶ್ ಗುಂಡೂರಾವ್, ಅಕ್ರಮದ ತನಿಖೆ ಚುರುಕಿಗೆ ಸೂಚಿಸಿದ್ದಾರೆ. ಆದರೆ ಈ ವೇಳೆ ರಾಜಕೀಯ ಪ್ರಭಾವ ಹೆಚ್ಚಳ ಮತ್ತು ಆಡಳಿತ ಪಕ್ಷದ ಎರಡು ಬಣಗಳ ಮಧ್ಯದ ಕಿತ್ತಾಟಕ್ಕೂ ಯೋಜನೆ ಬಳಕೆಯಾಗುತ್ತಿರುವ ಬಗ್ಗೆ ಆರೋಪ ಕೇಳಿಬಂದಿವೆ.
ಅಕ್ರಮ ಬಹಿರಂಗ: ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಣೆಯ ಅಕ್ರಮ ದಂಧೆ ವ್ಯಾಪಕವಾಗಿ ಹರಡಿರುವುದು ಪತ್ತೆಯಾಗಿತ್ತು. ಗೋದಾಮುಗಳಲ್ಲಿ ಅಕ್ರಮ ಅಕ್ಕಿ ಸಂಗ್ರಹಣೆ, ಲಾರಿಗಳಲ್ಲಿ ಗೋದಾಮುಗಳಿಗೆ ಸಾಗಣೆ ಮಾಡುವುದು ಸೇರಿ ವಿವಿಧ ರೀತಿಯ ಅಕ್ರಮಗಳು ನಡೆದಿದ್ದು ಜಿಲ್ಲಾಧಿಕಾರಿಗಳು ನಡೆಸಿದ ದಾಳಿಯಲ್ಲಿ ಬಹಿರಂಗವಾಗಿದೆ.
ಅನ್ನಭಾಗ್ಯ ಯೋಜನೆಯ ಜಾರಿಗೆ ಆರಂಭದಲ್ಲಿಯೇ ವಿಘ್ನಗಳೆದುರಾಗಿರುವುದು ಇಲಾಖೆಯ ಬಗ್ಗೆಯೇ ಅನುಮಾನ ಮೂಡಿಸಿದೆ. ಸಿಬ್ಬಂದಿ ಕೊರತೆ, ಲಭ್ಯವಿರುವ ಸಿಬ್ಬಂದಿಯ ಅಸಮರ್ಪಕ ಕಾರ್ಯನಿರ್ವಹಣೆ, ಆಡಳಿತರೂಢ ಕಾಂಗ್ರೆಸ್ ಪ್ರಮುಖರು ಯೋಜನೆಯ ವಿವಿಧ ಹಂತಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಆರೋಪದ ಮಧ್ಯೆ ಅಧಿಕಾರಿಗಳ ತಲೆದಂಡಕ್ಕೆ ದಾರಿಯಾಗಿದೆ.
ಲಿಂಗಸ್ಗೂರಲ್ಲಿ ಪತ್ತೆ: ಜಿಲ್ಲೆಯಲ್ಲಿ ಮೊದಲಿಗೆ ಲಿಂಗಸ್ಗೂರಿನಲ್ಲಿ ರಸ್ತೆಯಲ್ಲಿ ಕೆಟ್ಟುನಿಂತ ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಪತ್ತೆಯಾಗಿತ್ತು. ಆದರೆ ಆ ಸಂದರ್ಭ ದುರಸ್ತಿಗೀಡಾದ ಲಾರಿಯಲ್ಲಿದ್ದ ಅಕ್ಕಿಯನ್ನು ಮತ್ತೊಂದು ಲಾರಿಗೆ ತುಂಬಿ ಅಲ್ಲಿಂದ ತೆರಳಲು ಪೊಲೀಸರು ಅವಕಾಶ ಮಾಡಿಕೊಟ್ಟರೆಂಬ ಆರೋಪದ ಮೇಲೆ ಆಗ ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತುಗೊಂಡರು. ಲಿಂಗಸ್ಗೂರಿನಿಂದ ಹೊರಟ ಲಾರಿಯು ಕೊನೆಗೂ ಬಿಜಾಪುರದ ಆಹಾರ ಇಲಾಖೆಗೆ ತಲುಪಿತೆಂಬ ಮಾಹಿತಿ ತಡವಾಗಿ ಜಿಲ್ಲಾಡಳಿತಕ್ಕೆ ಸೇರಿದೆ.
ಇತ್ತೀಚೆಗೆ ಸಿಂಧನೂರಿನಲ್ಲಿ ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ ಮತ್ತು ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ 1 ಸಾವಿರ ಕ್ವಿಂ. ಅಕ್ಕಿ ಪತ್ತೆಯಾಗಿದೆ. ಇದೂ ಸೇರಿ ಒಟ್ಟು 2 ಸಾವಿರ ಕ್ವಿಂ ಅಕ್ಕಿ ಅಕ್ರಮ ಇದುವರೆಗೆ ಪತ್ತೆಯಾಗಿ ಅಕ್ರಮದ ಜಾಲ ಹರಡಿದ್ದು ಜಿಲ್ಲಾಡಳಿತಕ್ಕೆ ಗೊತ್ತಾಗಿದೆ.
ಜಿಲ್ಲಾಧಿಕಾರಿ ದಾಳಿ: ಅಕ್ರಮದ ಮಾಹಿತಿ ದೊರೆಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಸ್ಥಳಕ್ಕೆ ದೌಡಾಯಿಸಿ ಗೋದಾಮು ಜಪ್ತಿ ಮಾಡಿದ್ದಲ್ಲದೇ ಲಾರಿ ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ಪಡಿತರ ಸಾಗಣೆ ಗುತ್ತಿಗೆದಾರ ವೆಂಕಟೇಶ್ ಮತ್ತು ಗೋದಾಮು ನಿರ್ವಹಿಸುತ್ತಿದ್ದ ಗುನ್ನೇಶ್ವರರಾವ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ರಕ್ಷಣೆಯ ಆರೋಪ: ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಆದರೆ ಆಡಳಿತರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೊಬ್ಬರು ಆರೋಪಿಗಳ ಪರ ರಕ್ಷಣೆಗೆ ನಿಂತಿದ್ದಾರೆಂಬ ಆರೋಪ ಅದೇ ಪಕ್ಷದ ಮತ್ತೊಂದು ಬಣದಿಂದ ಕೇಳಿಬಂದಿದೆ. ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯ ಕಾಂಗ್ರೆಸ್ ಪಕ್ಷ ಎರಡು ಹೋಳು. ಪಕ್ಷದ ಬಣ ರಾಜಕೀಯಕ್ಕೆ ಈಗ ಅನ್ನಭಾಗ್ಯ ಯೋಜನೆಯ ಅಕ್ರಮ ಬಳಕೆಯಾಗುತ್ತಿರುವುದು ಸಚಿವರ ಭೇಟಿ ವೇಳೆ ಸ್ಪಷ್ಟವಾಗಿ ಕಂಡುಬಂದಿತು.
ಕೆಪಿಸಿಸಿ ಗೆ ದೂರು: ಸಚಿವರನ್ನು ಎರಡೂ ಬಣದವರು ಓಲೈಕೆಗೆ ತೊಡಗಿದ್ದು ಸ್ಪಷ್ಟವಾಗಿತ್ತು. ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಣೆಯಲ್ಲಿ ಜಿಲ್ಲೆಯಲ್ಲಿ ನಡೆದ ಅಕ್ರಮ ಮತ್ತು ಅದರಲ್ಲಿ ಶಾಮೀಲಾಗಿರುವ ಪಕ್ಷದವರ ಬಗ್ಗೆ ಜಿಲ್ಲಾ ಕಾಂಗ್ರೆಸ್ನಿಂದ ಕೆಪಿಸಿಸಿ ಅಧ್ಯಕ್ಷರಿಗೂ ಮಾಹಿತಿ ರವಾನಿಸುವ ಪ್ರಯತ್ನ ನಡೆದಿದೆ ಎಂದು ಗೊತ್ತಾಗಿದೆ.


ಬಣಗಳಿಗೆ ಬೆದರಿದ ಸಚಿವ ದಿನೇಶ್!
ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್, ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಅಕ್ರಮದಲ್ಲಿ ಶಾಮೀಲಾಗಿರುವವರು ಯಾವುದೇ ಪಕ್ಷದವರಾಗಿರಲಿ ಅದಕ್ಕೆ ಕ್ಷಮೆಯಿಲ್ಲ ಎಂದು ಬೆಳಗ್ಗೆ ಹೇಳಿದರು. ಆದರೆ ಸಂಜೆಯಾಗುತ್ತಿದ್ದಂತೆಯೇ ರಾಜಕೀಯ ಒತ್ತಡ ಅವರನ್ನೂ ಬಿಡಲಿಲ್ಲ.
ಬೆಂಗಳೂರಿಗೆ ಮರಳುವ ಮೊದಲು ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೂವರು ಆಹಾರ ನಿಗಮದ ಗೋದಾಮಿನ ಮೂವರು ವ್ಯವಸ್ಥಾಪಕರು ಹಾಗೂ ಒಬ್ಬ ಸಹಾಯಕ ವ್ಯವಸ್ಥಾಪಕರನ್ನು ಅಮಾನತುಗೊಳಿಸಲು ಡಿಸಿ ಅವರಿಗೆ ಸೂಚಿಸಿದರು. ಹಾಗೆಯೇ ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಗುರುರಾಜರಾವ್ ಅವರ ವರ್ಗಾವಣೆಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಒಂದೆಡೆ ರಾಜಕೀಯ ಲಾಭಕ್ಕಾಗಿ ಅನ್ನಭಾಗ್ಯ ಬಳಕೆಯಾಗುತ್ತಿದ್ದರೆ, ಮತ್ತೊಂದೆಡೆ ಆರೋಪಿಗಳ ರಕ್ಷಣೆಯ ಮಾತೂ ಕೇಳಿ ಬಂದಿದೆ. ಬಡವರ ಭಾಗ್ಯದ ಬಾಗಿಲು ತೆರೆಯಬೇಕಿದ್ದ ಅನ್ನಭಾಗ್ಯ ಯೋಜನೆಗೆ ಆರಂಭದಲ್ಲಿಯೇ ಅಕ್ರಮ, ಬೋಗಸ್ ಕಾರ್ಡುಗಳ ಗೊಂದಲದಿಂದಾಗಿ ದೌರ್ಭಾಗ್ಯ ಒದಗಿದ್ದಂತೂ ಸುಳ್ಳಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement