ಕನಕ ಜಯಂತಿ: ಪ್ರಬಂಧ ಸ್ಪರ್ಧೆ
ಸಿಂಧನೂರು: ಕನಕ ಜಯಂತಿ ಅಂಗವಾಗಿ ತಾಲೂಕ ಆಡಳಿತದಿಂದ ನಗರದ ಪದವಿ ಪೂರ್ವ, ಪದವಿ ಹಾಗೂ ಇತರೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ನ.19ರಂದು ಮಂಗಳವಾರ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯೆ ಸುಜಾತಾ ಹುನೂರು ತಿಳಿಸಿದ್ದಾರೆ. ಪ್ರತಿ ಕಾಲೇಜಿನಿಂದ ಒಬ್ಬ ವಿದ್ಯಾರ್ಥಿ ಭಾಗವಹಿಸುವುದು. ಪ್ರಬಂಧದ ವಿಷಯ ಭಕ್ತ ಕನಕದಾಸರ ಸಾಮಾಜಿಕ ಕೊಡುಗೆಗಳು ಪ್ರಬಂಧ ಬರೆಯಲು ಕಾಲಾವಕಾಶ 1 ಗಂಟೆಯಿದ್ದು, ನಗರದ ಕಾಲೇಜುಗಳ ಪ್ರಾಚಾರ್ಯರು ತಮ್ಮ ಕಾಲೇಜುಗಳಿಂದ ಒಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯನ್ನು ಭಾಗವಹಿಸಲು ಕಳುಹಿಸಿಕೊಡಬೇಕು. ವಿಜೇತ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಯಂತಿಯಂದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ 08535 223317 ಸಂಪರ್ಕಿಸಬಹುದು.
ಮುಖ್ಯಾಧಿಕಾರಿ ಮೇಲಿನ ಆರೋಪ ಸತ್ಯಕ್ಕೆ ದೂರ
ಲಿಂಗಸ್ಗೂರು: ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ್ ಅವರ ಕುರಿತು ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸುವ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಕಳೆದ ಎರಡು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಾಧಿಕಾರಿಗಳು ನಿಷ್ಠಾವಂತ ಅಧಿಕಾರಿಯಾಗಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಮಾದರಿ ಪುರಸಭೆ ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದಿದ್ದಾರೆ. ಪುರಸಭೆ ವ್ಯಾಪ್ತಿಯ ಸಾರ್ವಜನಿಕ ಮತ್ತು ಉದ್ಯಾನವನಕ್ಕೆ ಮೀಸಲಿರಿಸಿದ ಜಾಗೆಗಳ ಒತ್ತುವರಿ ಮಾಡಿದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ಮೇಲೆ ಗೂಬೆ ಕೂಡಿಸಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಜಿಲ್ಲಾಧ್ಯಕ್ಷ ಪ್ರತಾಪಸಿಂಗ್, ಹನುಮಂತ ನೆಲೋಗಿ, ಹುಲ್ಲಪ್ಪ, ನಾಗಪ್ಪ, ಬಸಪ್ಪ, ಅಪನಸಾಬ, ಶೋಬಿನಬಾಯಿ, ರಘು ಯತಗಲ್, ಮಲ್ಲಯ್ಯ ಗುತ್ತೇದಾರ ಇನ್ನಿತರರು ಇದ್ದರು.