ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನ್ಯಾ.ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಶಾಸಕರಿಗೆ ಮನವಿ

Rashmi Kasaragodu
Updated On : 19 Nov 2013, 12:18 pm

ದೇವದುರ್ಗ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಯಥಾವತ್ತು ಜಾರಿಗೆ ಆಗ್ರಹಿಸಿರುವ ಮಾದಿಗ ಮೀಸಲಾತಿ ಹೋರಾಟ ತಾಲೂಕು ಸಮಿತಿಯು ಶಾಸಕ ವೆಂಕಟೇಶ ನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದೆ.
ತಾಲೂಕಿನ ಅರಕೇರಾದಲ್ಲಿ ಸೋಮವಾರ ಶಾಸಕರಿಗೆ ಮನವಿ ಸಲ್ಲಿಸಿ, ಮಾದಿಗರಿಗೆ ಒಳಮೀಸಲಾತಿ ಮೂಲಕ ವಿವಿಧ ಸೌಲತ್ತಿಗೆ ಅವಕಾಶ ಕಲ್ಪಿಸುವ ವರದಿಯನ್ನು ಸದಾಶಿವ ಆಯೋಗವು ನೀಡಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆಯೋಗದ ವರದಿ ಸಲ್ಲಿಸಿದ್ದರೂ ಜಾರಿಗೆ ಮುಂದಾಗಿಲ್ಲ ಎಂದು ಟೀಕಿಸಿದರು.
ಸದ್ಯದ ಕಾಂಗ್ರೆಸ್ ಸರ್ಕಾರ ವರದಿ ಜಾರಿಗೆ ಮೀನಮೇಷ ಎಣಿಸುತ್ತಿದೆ. ಕಳೆದ ಬಾರಿ ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿಗಾಗಿ ಉಗ್ರ ಹೋರಾಟ ನಡೆಸಿದ ವೇಳೆ ಸಂಘಟನೆಗಳ ಕಾರ್ಯಕರ್ತರ ಹೋರಾಟ ಹತ್ತಿಕ್ಕುವ ಕಾರ್ಯವನ್ನು ಆಗಿನ ಸರ್ಕಾರ ಮಾಡುವ ಮೂಲಕ ದರ್ಪ ಪ್ರದರ್ಶಿಸಿತ್ತು. ಆಗ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿ ಘಟನೆಯನ್ನು ಟೀಕಿಸಿದ್ದರು.
ಆದರೆ ಸದ್ಯ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದು, ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಶೀಘ್ರದಲ್ಲಿಯೇ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ವರದಿ ಜಾರಿಗೆ ಪೂರಕ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು.
ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಮಾನಪ್ಪ ಮೇಸ್ತ್ರಿ, ಪ್ರಧಾನ ಕಾರ್ಯ ದರ್ಶಿ ಬಸವರಾಜ, ಉಪಾಧ್ಯಕ್ಷ ಪ್ಯಾಟೆಪ್ಪ ಮಸರಕಲ್ ಸೇರಿ ಅನೇಕರಿದ್ದರು.
ಸಿರವಾರದಲ್ಲಿ ಮುಂದಿನ ವರ್ಷ ಸರ್ಕಾರಿ ಕಾಲೇಜು ಆರಂಭ
ರಾಯಚೂರು: ಮಾನವಿ ತಾಲೂಕಿನ ಸಿರವಾರ ಪಟ್ಟಣದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಥಮ ದರ್ಜೆಕಾಲೇಜು ಕಾರ್ಯಾರಂಭ ಮಾಡಲಿದೆ. ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಕಾಲೇಜಿನ ಕಾರ್ಯಾರಂಭಕ್ಕಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಪಾಂಡು ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಗುಲ್ಬರ್ಗ ವಿವಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಾಲೇಜು, ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಹಾಗೂ ಬಿಬಿಎಂ ಕೋರ್ಸುಗಳನ್ನು ಹೊಂದಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement