ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪ್ರತಿ ರೈತ ಸಂಪರ್ಕ ಕೇಂದ್ರಕ್ಕೊಬ್ಬ ಹೆಚ್ಚುವರಿ ಸಿಬ್ಬಂದಿ

Rashmi Kasaragodu
Updated On : 19 Nov 2013, 12:21 pm

ಗುಲ್ಬರ್ಗ:  ರಾಜ್ಯದಲ್ಲಿರುವ ಎಲ್ಲ 747 ರೈತ ಸಂಪರ್ಕ ಕೇಂದ್ರಗಳಿಗೆ ಇನ್ನೆರಡು ತಿಂಗಳಲ್ಲಿ ಹೆಚ್ಚುವರಿ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ರೈತ ಸಂಪರ್ಕ ಕೇಂದ್ರದಲ್ಲಿರುವ ಕೃಷಿ ಇಲಾಖೆ ತಾಂತ್ರಿಕ ಸಿಬ್ಬಂದಿ ವಿಸ್ತರಣಾ ಕೆಲಸಗಳಿಗೆ ಗಮನಹರಿಸದೆ ದಾಖಲೆ ನಿರ್ವಹಿಸುವುದರಲ್ಲೇ ಕಾಲಹರಣ ಮಾಡುವಂತಾಗಿದೆ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿ ತಾಂತ್ರಿಕ ಸಿಬ್ಬಂದಿಗೆ ಕೃಷಿ ವಿಸ್ತರಣೆ ಕೆಲಸಗಳಿಗೆ ತೊಡಗುವಂತಹ ಮುಕ್ತ ವಾತಾವರಣ ನಿರ್ಮಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ನೇಮಕ: ಹೊರಗುತ್ತಿಗೆ ಆಧಾರದಲ್ಲಿ ಪದವೀಧರರನ್ನು ಗುಮಾಸ್ತ ಹುದ್ದೆಗೆ ನೇಮಕ ಮಾಡಿಕೊಳ್ಳುವ ಕೆಲಸಕ್ಕೆ ಚಾಲನೆ ದೊರಕಿದೆ. ಎಲ್ಲವೂ ಅಂದುಕೊಂಡಂತೆ ನಡೆದದ್ದೇ ಆದಲ್ಲಿ ಇನ್ನೆರಡು ತಿಂಗಳಲ್ಲಿ ಹೆಚ್ಚುವರಿ ಸಿಬ್ಬಂದಿ ರೈತ ಸಂಪರ್ಕ ಕೇಂದ್ರಗಳಿಗೆ ಬರುತ್ತಾರೆ ಎಂದರು.
ರೈತ ಸಂಪರ್ಕ ಕೇಂದ್ರದಲ್ಲಿ ಈಗಿರುವ ಸಿಬ್ಬಂದಿಗೆ ಹೆಚ್ಚಿನ ಕೆಲಸದ ಒತ್ತಡ ಕಾಡುತ್ತಿದೆ. ಆದ್ದರಿಂದ ವಿಸ್ತರಣೆ ಕೆಲಸಗಳಿಗೆ ಇವರು ಮನಸ್ಸು ಮಾಡುತ್ತಿಲ್ಲ. ಹೆಚ್ಚುವರಿ ಸಿಬ್ಬಂದಿ ಬಂದ ನಂತರ ತಾಂತ್ರಿಕ ಸಿಬ್ಬಂದಿಗೆ ರೈತರ ಹೊಲಗಳಿಗೆ ಹೋಗಲು, ಅಲ್ಲಿ ರೈತರಂದಿಗೆ ನೇರ ಸಂವಾದಿಯಾಗಲು ಅನುಕೂಲವಾಗುತ್ತದೆ ಎಂದರು.
ಗಣಕೀಕರಣಕ್ಕೆ ಚಿಂತನೆ: ರೈತ ಸಂಪರ್ಕ ಕೇಂದ್ರಗಳನ್ನು ಗಣಕೀಕರಣಗೊಳಿಸುವ ಚಿಂತನೆ ಸಾಗಿದೆ. ಅಲ್ಲಿನ ಚಟುವಟಿಕೆಗಳೆಲ್ಲವೂ ಅಂತರ್ಜಾಲದಲ್ಲಿ ಜೋಡಣೆಯಾದಲ್ಲಿ ಇಲ್ಲಿನ ಸಿಬ್ಬಂದಿಗೂ ಕೆಲಸದ ಒತ್ತಡ ತಗ್ಗುವ ಸಾಧ್ಯತೆಗಳಿವೆ ಎಂದ ಸಚಿವರು, ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ತೊಗರಿ ಖರೀದಿ- ಜೋಳಕ್ಕೆ ಬೆಂಬಲ ಬೆಲೆ
ತೊಗರಿ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ. ಈ ಸುಗ್ಗಿಯಲ್ಲಿ ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಇಳಿದು ತೊಗರಿ ಖರೀದಿ ಮಾಡುತ್ತೇವೆಂದು ಸಚಿವರು ಭರವಸೆ ನೀಡಿದರು. ತೊಗರಿ ಮಂಡಳಿ ಸಿಬ್ಬಂದಿಗಳಿಲ್ಲದೆ ಭಣಗುಡುತ್ತಿದೆ ಎಂಬ ಸಂಗತಿ ಗಮನಕ್ಕೆ ತಂದಾಗ ಸಿಬ್ಬಂದಿ ಇಲ್ಲದಿದ್ದರೂ ಪರವಾಗಿಲ್ಲ, ಅನ್ಯ ಇಲಾಖೆಗಳ ಸಹಾಯ- ಸಹಕಾರದಿಂದ ತಾವು ರೈತರಿಗೆ ಸಂಕಷ್ಟವಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪಡಿತರದಲ್ಲಿ ಜೋಳ ನೀಡುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜೋಳ ಸಂಗ್ರಹಕ್ಕೆ ಅದರ ಬೆಂಬಲ ಬೆಲೆಗೆ ಮತ್ತೆ 300 ಸೇರ್ಪಡೆ ಮಾಡಿ ರೈತರಿಗೆ ಪ್ರತಿ ಕ್ವಿಂ.ಗೆ 1,800 ನೀಡಲಾಗುತ್ತದೆ. ಜೋಳ ಎಲ್ಲಿ ಹೆಚ್ಚು ಬೆಳೆದಿದೆಯೋ ಅಲ್ಲೆಲ್ಲಾ ಸರ್ಕಾರವೇ ಮುಂದೆ ನಿಂತು ರೈತರಿಂದ ಜೋಳ ಖರೀದಿಸಲಿದೆ ಎಂದರು.
ಬೆಲೆ ಆಯೋಗ ಕರಡು ಸಿದ್ಧ: ರಾಜ್ಯದಲ್ಲಿಯೂ ರೈತರ ಉತ್ಪನ್ನಗಳ ಬೆಲೆ ನಿಗದಿಗೆ ಪ್ರತ್ಯೇಕ ಕೃಷಿ ಬೆಲೆ ಆಯೋಗ ರಚನೆಗೆ ಗಂಭೀರ ಚಿಂತನೆ ಸಾಗಿದೆ. ಈಗಾಗಲೇ ತಜ್ಞರನ್ನು ಒಳಗೊಂಡ ಸಮಿತಿ ಬೆಲೆ ಆಯೋಗದ ಕರಡು ಸಿದ್ಧಪಡಿಸಿದ್ದು ಅದನ್ನು ಸಂಪುಟದಲ್ಲಿಯೂ ಮಂಡಿಸಲಾಗಿದೆ. ಸಂಪುಟ ಉಪಸಮಿತಿ ಮುಂದೆ ಸದರಿ ಕರಡು ಪರಿಶೀಲನೆಯಲ್ಲಿದೆ, ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಕೃಷಿ ಬೆಲೆ ಆಯೋಗದ ರಚನೆ ಬಗ್ಗೆ ಎಲ್ಲವೂ ಅಧಿಕೃತವಾಗುವ ಸಾಧ್ಯತೆಗಳಿವೆ ಎಂದುಸಚಿವರು ಹೇಳಿದರು.
ಜಲಾನಯನ ಇಲಾಖೆ: ಜಲಾನಯನ ಯೋಜನೆಯಲ್ಲಿ ಬದುಗಳಲ್ಲಿ ಗಿಡ ನೆಡುವ ಯೋಜನೆಯಲ್ಲಿ ಅವ್ಯವಹಾರದ ವಾಸನೆ ಬರುತ್ತಿದೆ. ಈಚೆಗೆ ತಮ್ಮ ಕ್ಷೇತ್ರ ಬೇಟಿ ಸಂದರ್ಭದಲ್ಲಿ ಈ ಸಂಗತಿ ಗಮನಕ್ಕೆ ಬಂದಿದ್ದು ಬರುವ ದಿನಗಳಲ್ಲಿ ಗಿಡ ನೆಡುವಾಗ ಅವುಗಳ ಫೋಟೋ ಸಮೇತ ಮಾಹಿತಿ ಕಳಿಸಿದ ನಂತರವಷ್ಟೇ ಬಿಲ್ ಪಾವತಿಗೆ ಅನುಮತಿಸಲಾಗುತ್ತದೆ. ದೋಷಗಳು ಕಂಡಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದರು.
ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಚಿದಾನಂದ ಮೂರ್ತಿ, ಕೃಷಿ ಇಲಾಖೆ ಆಯುಕ್ತ ಧರ್ಮರಾಜನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement