ಪ್ರಿಯಾಂಕ್ ಖರ್ಗೆ ಜನ್ಮದಿನ: ಇಂದು ರಕ್ತದಾನ ಶಿಬಿರ
ಚಿತ್ತಾಪುರ: ಶಾಸಕ ಪ್ರಿಯಾಂಕ್ ಖರ್ಗೆ ಅವರ ಜನ್ಮ ದಿನ ನಿಮಿತ್ತ ನ.19 ರಂದು ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ವೈದ್ಯ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಪ್ರಭುರಾಜ ಕಾಂತಾ ತಿಳಿಸಿದ್ದಾರೆ. ಜನ್ಮದಿನ ಕಾರ್ಯಕ್ರಮ ಬೆಂಗಳೂರಿನಲ್ಲಿ 22ರಂದು ನಡೆಯಲಿದ್ದು, ಅಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇದರಿಂದಾಗಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮೂರು ದಿನ ಮುಂಚೆ ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 19ರಂದು ಬೆ.10ಕ್ಕೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. 18 ರಿಂದ 60 ವರ್ಷದೊಳಗಿನವರು ರಕ್ತ ದಾನ ಮಾಡಬಹುದು. ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.
ನಾಳೆ ಕನಕ ಜಯಂತಿ
ಗುಲ್ಬರ್ಗ: ದಾಸಶ್ರೇಷ್ಠ ಭಕ್ತ ಕನಕದಾಸರ 526ನೇ ಜಯಂತ್ಯುತ್ಸವ ಕಾರ್ಯಕ್ರಮ ಜಿಲ್ಲಾಡಳಿತ, ಕರ್ನಾಟಕ ಪ್ರದೇಶ ಕುರುಬರ ಸಂಘದ ಸಂಯುಕ್ತಾಶ್ರಯದಲ್ಲಿ ನ.20ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಮರತೂರ, ಜಿಲ್ಲಾ ಗೊಂಡ, ಕಾಡುಕುರುಬ ಸಂಘದ ಅಧ್ಯಕ್ಷ ಮಹಾಂತೇಶ ಕೌಲಗಿ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆ.10ಕ್ಕೆ ಕನಕದಾಸರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ನಗರದ ನಗರೇಶ್ವರ ಬಾಲ ವಿಕಾಸ ಮಂದಿರದಿಂದ ಆರಂಭವಾಗುವುದು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಚಾಲನೆ ನೀಡಲಿದ್ದಾರೆ ಎಂದರು. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಸಮಾಜದ ಶ್ರೀಗಳಾದ ಸಿದ್ದರಮಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಸಚಿವರು, ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ನಿರ್ಲಕ್ಷ್ಯ: ನೀರಿನ ತೊಟ್ಟಿಯಲ್ಲಿ ಕಸ
ಮುದಗಲ್: ಸಮಿಪದ ನಾಗರಹಾಳ ಗ್ರಾಪಂ ಆಡಳಿತದ ನಿರ್ಲಕ್ಷ್ಯದಿಂದ ಗ್ರಾಪಂ ಎದುರು ಇರುವ ಜಾನುವಾರುಗಳಿಗೆ ನೀರು ಕುಡಿಸಲು ನಿರ್ಮಿಸಿದ ನೀರು ಸಂಗ್ರಹ ತೊಟ್ಟಿ ಕಸ ಕಡ್ಡಿ ತುಂಬಿ, ಕಲ್ಮಷ ನೀರು ಕುಡಿದ ಜಾನುವಾರುಗಳಿಗೆ ರೋಗದ ಭೀತಿ ಎದುರಾಗಿದೆ. ಗ್ರಾಪಂ ಎದುರು ಇದ್ದ ಶೌಚಾಲಯ, ಚರಂಡಿಗಳು ಕಸದಿಂದ ತುಂಬಿ ದುರ್ನಾತ ಬೀರುತ್ತಿವೆ. ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿದ್ದು, ಯಾರು ಕೇಳುವರಿಲ್ಲ ಎನ್ನುವಂತಾಗಿದೆ. ಈ ಕುರಿತು ಅಧಿಕಾರಿ ಹಾಗೂ ಆಡಳಿತ ವರ್ಗ ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಮಲಿನ ನೀರು ಹರಿಯುತ್ತಿದೆ. ಇದರ ಜೊತೆಗೆ ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿದೆ. ಕಸ ವಿಲೇವಾರಿಗೆ ಗ್ರಾಪಂ ಸಿಬ್ಬಂದಿ ಇದ್ದರೂ ಉಪಯೋಗವಿಲ್ಲದಂತಾಗಿದೆ. ಗ್ರಾಪಂ ಆಡಳಿತ ಕೂಡಲೇ ಎಚ್ಚೆತ್ತು ನೀರು ಸಂಗ್ರಹ ತೊಟ್ಟಿ, ಶೌಚಾಲಯ ಹಾಗೂ ಚರಂಡಿಗಳು, ರಸ್ತೆ ಸ್ವಚ್ಛಗೊಳಿಸಿ ಕಸದ ರಾಶಿ ವಿಲೇವಾರಿ ಮಾಡಿ, ಸ್ವಚ್ಛತೆ ಕಾಪಾಡಬೇಕೆಂದು ಸ್ಥಳೀಯ ಕರವೇ ಅಧ್ಯಕ್ಷ ಬಾಲಪ್ಪ ಕನಕೇರಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.