ಫೆಬ್ರವರಿಯಲ್ಲಿ ಬೆಳೆ ಸ್ಥಿತಿ ಗಮನಿಸಿ ಮತ್ತೊಂದು ಸಭೆ: ಗುರುಪಾಟೀಲ
ಶಹಾಪುರ: ನಾರಾಯಣಪುರ ಎಡದಂಡೆ ಕಾಲುವೆ (ಎನ್ಎಲ್ಬಿಸಿ)ಗೆ ಮಾ.10ರವರೆಗೆ ನೀರು ಹರಿಸಲು ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಕ್ಕೆ ಬರಲಾಯಿತು ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
ನೀರಾವರಿ ಸಲಹಾ ಸಮಿತಿಯಲ್ಲಿ ಪಾಲ್ಗೊಂಡು ಬಂದ ನಂತರ ಸುದ್ದಿಗಾರರೊಂದಿಗೆ ಸಭೆಯ ಅಭಿಪ್ರಾಯ ಹಂಚಿಕೊಂಡರು. ಎನ್ಎಲ್ಬಿಸಿ ವ್ಯಾಪ್ತಿಯಲ್ಲಿ ಬರುವ ರೈತವರ್ಗದ ಬೆಳೆಗಳ ಸ್ಥಿತಿ ಗತಿ ನೋಡಿಕೊಂಡು ಬೇಸಿಗೆ ಕುಡಿವ ನೀರು ಸಂಗ್ರಹ ಗಮನದಲ್ಲಿಟ್ಟುಕೊಂಡು ಫೆಬ್ರುವರಿ ಕೊನೆ ವಾರದಲ್ಲಿ ಇನ್ನೊಂದು ಸಭೆ ನಡೆಸುವುದು ಸೂಕ್ತ ಎಂಬ ಸಲಹೆಯನ್ನು ನೀಡಲಾಗಿದೆ ಎಂದರು.
ಎಸ್ಬಿಸಿ, ಎಂಬಿಸಿ ಕಾಲುವೆ ಕೆಳಭಾಗದ ರೈತರಿಗೆ ಇದುವರೆಗೂ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಕೋಟಿ ರು. ಖರ್ಚು ಮಾಡಿ ನಿರ್ಮಿಸಿದ ಕಾಲುವೆಗಳು ನಿರ್ವಹಣೆಗೆ ಅನುದಾನ ಸದ್ಬಳಕೆಯಾಗಬೇಕು. ಕಾಲುವೆಗಳ ಉಳಿಸು ರೈತರ ಭವಿಷ್ಯಕ್ಕೆ ಬಹುಮುಖ್ಯವಾಗಿದ್ದು ಅಧಿಕಾರಿಗಳ ಜವಾಬ್ದಾರಿಯುತ ಕರ್ತವ್ಯ ಮುಖ್ಯವಾಗಿದೆ. ಸಾಧ್ಯವಾದಷ್ಟೂ ಕೆಳಭಾಗದ ರೈತರಿಗೆ ನೀರೊದಗಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಸಭೆಯಲ್ಲಿ ಮನವರಿಕೆ ಮಾಡಲಾಯಿತು ಎಂದು ಶಾಸಕ ಗುರುಪಾಟೀಲ ತಿಳಿಸಿದರು.