27ರಂದು ಸ್ತ್ರೀ ದೌರ್ಜನ್ಯ ತಡೆ ಸಮಾವೇಶ
ರಾಯಚೂರು: ದೆಹಲಿಯಲ್ಲಿ ನಡೆದ ನಿರ್ಭಯಳ ಮೇಲಿನ ಅತ್ಯಾಚಾರ ಪ್ರಕರಣ ಮರುಕಳಿಸದಿರಲೆಂದು ಹಾಗೂ ಮಹಿಳೆಯರ ಮೇಲಿನ ಅಪರಾಧ ತಡೆಯಲು ಆಗ್ರಹಿಸಿ ವಿದ್ಯಾರ್ಥಿ-ಯುವಜನ-ಮಹಿಳೆಯರ ಜಿಲ್ಲಾ ಮಟ್ಟದ ಸಮಾವೇಶವನ್ನು ನ.27ರಂದು ನಗರದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಮಂಗಳವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಿ.ಆರ್. ಅಪರ್ಣಾ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಯುವತಿ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರಿಗೆ ಅಲ್ಲಿನ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸುವ ಮೂಲಕ ಹೋರಾಟಗಾರರಿಗೆ ಭರವಸೆ ಮೂಡಿಸಿದೆ. ಆದರೂ ಮಹಿಳೆಯರ ಮೇಲೆ ಅಪರಾಧ ಮಾತ್ರ ಇನ್ನೂ ನಿಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಚುತ್ತಿರುವ ಅಪರಾಧಗಳಿಗೆ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಶ್ಲೀಲತೆ, ಮೊಬೈಲ್ ಮತ್ತು ಅಂತರ್ಜಾಲದಲ್ಲಿನ ಲೈಂಗಿಕತೆಯನ್ನು ಪ್ರಚೋದಿಸುವ ದೃಶ್ಯಗಳೇ ಮೂಲ ಕಾರಣ ಎಂದು ಅಧ್ಯಯನಗಳಿಂದ ಪತ್ತೆಯಾಗಿದೆ. ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಇಂಥ ಕೀಳು ಪ್ರವೃತ್ತಿ ಹೆಚ್ಚುತ್ತಿದ್ದು, ಮಹಿಳೆಯರು ಅಸುರಕ್ಷಿತ ಪರಿಸರದಲ್ಲಿ ಬದುಕು ನಡೆಸುವಂತಾಗಿದೆ ಎಂದು ಆರೋಪಿಸಿದರು.
ಜಾಗತೀಕರಣ ನೀತಿಯ ಜಾರಿಯಿಂದಾಗಿ ದೇಶದಲ್ಲಿ ದೇಶದ ಸಂಸ್ಕೃತಿಗೆ ಅಪಚಾರ ಎಸಗುವಂಥ ಘಟನೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಬೆಳೆಸಿ ಮಹಿಳೆಯರ ಘನತೆ, ಗೌರವ ಹೆಚ್ಚಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನ.27 ರಂದು ಜಿಲ್ಲಾಮಟ್ಟದಲ್ಲಿ ಸಮಾವೇಶ ಆಯೋಜಿಸಿದೆ ಎಂದು ತಿಳಿಸಿದರು.
ನಗರದ ಸ್ಪಂದನ ಸಭಾಂಗಣದಲ್ಲಿ ನ.27 ರಂದು ಬೆಳಗ್ಗೆ 11ಕ್ಕೆ ಆಯೋಜಿಸಿರುವ ಸಮಾವೇಶದಲ್ಲಿ ನಗರದ ಎಸ್ಸೆಲ್ಲೆನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ. ಚೆಟ್ಟಿ, ಮಸ್ಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕುಮಾರಸ್ವಾಮಿ, ಶಿವರಾಜ್ ಪಾಟೀಲ್ ವಕೀಲರು, ಪತ್ರಕರ್ತೆ ವೀಣಾ ಪ್ರಮೋದ್, ಎಐಡಿಎಸ್ ಸಂಘಟನೆ ರಾಜ್ಯ ಉಪಾಧ್ಯಕ್ಷ ರವಿ, ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ್ ಪಾಲ್ಗೊಂಡು ಮಾತನಾಡಲಿದ್ದಾರೆಂದು ತಿಳಿಸಿದರು.
ಅದೇ ರೀತಿ ದೇಶಮಟ್ಟದಲ್ಲಿಯೂ ದೆಹಲಿಯ ನಿರ್ಭಯಳ ಅತ್ಯಾಚಾರ ಪ್ರಕರಣದ ವರ್ಷಾಚರಣೆ ಜತೆಗೆ ಕರಾಳ ಘಟನೆಯ ಮೂಲಕ ಜನತೆಗೆ ಎಚ್ಚರಿಸಲು ಡಿ.29 ರಂದು ದೆಹಲಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ. ಡಿ.30 ರಂದು ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಲಾಗುತ್ತಿದ್ದು, ರಾಷ್ಟ್ರದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಯುವಕ- ಯುವತಿಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಮಹೇಶ್ ಚೀಕಲಪರ್ವಿ, ಚೇತನಾ ಬನಾರೆ, ಚನ್ನಬಸವ ಜಾನೇಕಲ್ ಸೇರಿ ಅನೇಕರಿದ್ದರು.