ಗುರಿ ಸಾಧನೆಗೆ ಏಕಾಗ್ರತೆ ಅವಶ್ಯಕ: ನ್ಯಾ. ಪಿ. ಕೃಷ್ಣಭಟ್
ಕನ್ನಡಪ್ರಭ ವಾರ್ತೆ ರಾಯಚೂರು ನ.19
ಮಕ್ಕಳು ಸತತ ಪರಿಶ್ರಮ, ನಿರ್ದಿಷ್ಟ ಗುರಿಯಿರಿಸಿಕೊಂಡು ಏಕಾಗ್ರತೆಯಿಂದ ಅಧ್ಯಯನಕ್ಕೆ ತೊಡಗಿದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಕಷ್ಟವೇನಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ. ಕೃಷ್ಣಭಟ್ ಸಲಹೆ ನೀಡಿದರು.
ಅವರು ನಗರದ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯುನಿಸೆಫ್, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಭವಿಷ್ಯ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿಕೆಯ ಮೂಲಕ ಭವಿಷ್ಯಕ್ಕೆ ಮೆರುಗು ನೀಡುವ ಕಾರ್ಯ ಪಾಲಕರು ಮಾಡಬೇಕು. ಅದರಲ್ಲೂ ಹಿಂದುಳಿದ ರಾಯಚೂರುನಂಥ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದು ಕಷ್ಟ ಸಾಧ್ಯ. ಇಂಥ ಪರಿಸರದಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ಬಹುದೊಡ್ಡ ಸವಾಲೇ ಸರಿ ಎಂದು ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಒಳ್ಳೆಯ ಪರಿಸರ, ಜೀವನ ಮೌಲ್ಯಗಳ ಅನುಭವ, ಉತ್ತಮ ಶಿಕ್ಷಣ, ಆರೋಗ್ಯ ದೊರಕಿಸಿಕೊಡುವುದು ಎಲ್ಲ ಆದ್ಯ ಕರ್ತವ್ಯವಾಗಬೇಕು. ಪಾಲಕರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ಮಕ್ಕಳ ಬೇಕು ಬೇಡಗಳ ಬಗ್ಗೆ ಅರಿತು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಹಗಲುಗನಸು ಕಾಣುವುದು ಸರಿಯಲ್ಲ. ಆದರೆ ಸಾಧನೆಗೆ ಪೂರಕವಾದ ಕನಸು ಕಂಡು ಅದನ್ನು ಸಾಕಾರಗೊಳಿಸಲು ಮಕ್ಕಳು ಮುಂದಾಗಬೇಕು. ಏಕಾಗ್ರತೆಯನ್ನು ಕಳೆದುಕೊಳ್ಳದೇ ಜೀವನದಲ್ಲಿ ಉತ್ತುಂಗಕ್ಕೇರುವಂತೆ ಸಲಹೆ ನೀಡಿದ ಅವರು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮಕ್ಕಳ ಹೋರಾಟಗಾರ್ತಿ ಅಫ್ಘಾನಿಸ್ತಾನದ ಮಲಾಲಾ ಅವರ ಹೆಸರು ನೆನಪಿಸಿದ ಅವರು ಸಂಕಷ್ಟದ ಗಳಿಗೆಯಲ್ಲೂ ಎದೆಗುಂದದೆ ಬದುಕನ್ನು ಅವರು ರೂಪಿಸಿಕೊಂಡ ಬಗೆಯು ಎಲ್ಲ ಕಾಲಕ್ಕೂ ಮಕ್ಕಳಿಗೆ ಮಾದರಿ ಎಂದು ಹೇಳಿದರು.
ದಿಟ್ಟ ನಡೆ: ಯಾವಾಗಲೂ ಮಕ್ಕಳು ಕನಸು ನನಸಾಗಿಸುವ ನಿಟ್ಟಿನಲ್ಲಿ ಆಲೋಚಿಸಬೇಕು. ಕೇವಲ ಕನಸು ಕಾಣುವುದರಿಂದ ಪ್ರಯೋಜನವಾಗದು. ಅದನ್ನು ಸಾಕಾರಗೊಳಿಸುವ ಗುರಿಯಿರಿಸಿಕೊಂಡು ಗುರಿಯ ಬೆನ್ನಟ್ಟುವಂತೆ ಮನವಿ ಮಾಡಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಎಲ್ಲರೂ ಮಾಡುವಂತೆ ಕರೆ ನೀಡಿದರು.
ಜಿಲ್ಲೆಯಮಟ್ಟಿಗೆ ಗುಣಮಟ್ಟದ ಶಿಕ್ಷಣದ ಕೊರತೆ, ಬಾಲ್ಯವಿವಾಹ ಪದ್ಧತಿಗಳು ಸಮಾಜಕ್ಕೆ ಬಹುದೊಡ್ಡ ಸವಾಲಾಗಿವೆ. ಇವುಗಳ ನಿವಾರಣೆಗೆ ಎಲ್ಲರ ಪರಿಶ್ರಮ ಅವಶ್ಯಕ. ಮಕ್ಕಳ ಬದುಕು ಸುಂದರವಾಗಿಸುವ ಕಾರ್ಯಕ್ಕೆ ಸಮಾಜ ಪೂರಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಡಿಡಿಪಿಐ ರಾಮಾಂಜನೇಯ ಮಾತನಾಡಿ, ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳಾಗಿಸದೇ ಅವರಲ್ಲಿನ ಪ್ರತಿಭೆ ಗುರುತಿಸಿ ಅದಕ್ಕೆ ಪೂರಕವಾಗಿ ಪಾಲಕರು ಪ್ರೋತ್ಸಾಹಿಸುವುದು ಅವಶ್ಯಕ ಎಂದರು. ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು, ಎಸ್ಪಿ ಎಂ.ಎನ್. ನಾಗರಾಜ್ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ, ಮಹಮದ್ ಮುಜಾ ಹಿದ್ ಉಲ್ಲಾ, ವಕೀಲರ ಸಂಘದ ಅಧ್ಯಕ್ಷ ಭಾನುರಾಜ್, ಪ್ರಭುದೇವ್ ಪಾಟೀಲ್, ಬಿಇಒ ಮಲ್ಲಿಕಾರ್ಜುನ, ಯುನಿಸೆಫ್ನ ರಾಘವೇಂದ್ರ ಭಟ್ ಸೇರಿ ಅನೇಕರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಪಾಲ್ಗೊಂಡಿದ್ದರು.