ಮಕ್ಕಳಿಗೆ ಜನಪದದ ಮೌಲ್ಯ ತಿಳಿಸಿ: ವೆಂಕನಗೌಡ ವಟಗಲ್
ಸಿಂಧನೂರು: ಆಯಾ ಕಾಲದ ಸಾಂಸ್ಕೃತಿಕ ಮೌಲ್ಯಗಳಿಂದ ಸಮಾಜವನ್ನು ಅತ್ಯಂತ ಗಟ್ಟಿಯಾಗಿ ಕಟ್ಟಿದ ಸಾಹಿತ್ಯ ಜನಪದ. ಜನತೆಯ ಬದುಕಲ್ಲಿ ಅರಳಿದ ಸಾಹಿತ್ಯ ವಿಶ್ವದಲ್ಲಿ ಮತ್ತೊಂದಿಲ್ಲ. ಈ ಸಾಹಿತ್ಯದ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ಖ್ಯಾತ ಹಾಸ್ಯ ಸಾಹಿತಿ ಜನಪದ ಕವಿ ವೆಂಕನಗೌಡ ವಟಗಲ್ ತಿಳಿಸಿದರು.
ತಾಲೂಕಿನ ಪಗಡದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಲಗೆ ಬಡಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಜನಪದ ಸೃಷ್ಟಿಯಾಗಿದ್ದು ಅಜ್ಞಾತ ಸಾಹಿತಿಗಳಿಂದ. ಅಲ್ಲಿ ಬದುಕಿದೆ, ಬವಣೆಯಿದೆ. ಬರ್ಬರತೆಯಿದೆ. ದಯೆ- ಧರ್ಮ- ದಾನ- ದಾಸೋಹವಿದೆ. ಎಲ್ಲ ಸಾಹಿತ್ಯಗಳ ಆಗರ ಬಂಡಾಯದ ದನಿಯಾಗಿ ಸಂಘರ್ಷದ ಒಡಲಾಗಿ ಸಮತೆಯ ಹಣತೆಯಾಗಿ ಜನಪದ ನಮ್ಮೇಲ್ಲರಿಗೆ ಬದುಕಿನ ಕಥೆ ಮತ್ತು ವ್ಯಥೆ ಎರಡನ್ನೂ ತಿಳಿಸಿದೆ ಎಂದರು.
ಮಕ್ಕಳಿಗೆ ನೆಹರು ಉಡುಗೊರೆ: ಮುಖ್ಯಗುರು ಗಿರಿಜಮ್ಮ ಮಾತನಾಡಿ, ನೆಹರು ತಮ್ಮ ಹುಟ್ಟಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲು ಹೇಳಿದ್ದು ಮಕ್ಕಳಿಗೆ ಕೊಟ್ಟ ಗೌರವ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರಧಾನಿ ಯಂಕಮ್ಮ ಮತ್ತು ಉಪ ಪ್ರಧಾನಿ ದೇವರಾಜ ಇದ್ದರು. ಶಿಕ್ಷಕಿ ವಾಸಂತಿ ಸ್ವಾಗತಿಸಿದರು. ಅಮರೇಶ ಹೂಗಾರ ಪ್ರಾರ್ಥಿಸಿದರು. ಶಿಕ್ಷಕಿ ಪೂರ್ಣಿಮಾ ನಿರೂಪಿಸಿದರು. ಕವಿತಾರಾಣಿ ಬಹುಮಾನ ವಿತರಿಸಿದರು.