ರಸ್ತೆ ಸಂಚಾರ ನಿರ್ಬಂಧ ರದ್ದತಿಗೆ ಒತ್ತಾಯ
ಕ.ಪ್ರ. ವಾರ್ತೆ ರಾಯಚೂರು ನ.19
ನಗರದ ಪಟೇಲ್ ರಸ್ತೆಯಲ್ಲಿ ಸರಕು ವಾಹನಗಳಿಗೆ ಪ್ರವೇಶ ನಿರ್ಬಂಧಿಸಿರುವುದನ್ನು ಕೂಡಲೇ ರದ್ದುಗೊಳಿಸಿ ವರ್ತಕರಿಗೆ ಸರಕು ಸಾಗಣೆ ವಾಹನಗಳಿಗೆ ಸರಕು ತುಂಬಲು ಮತ್ತು ಇಳಿಸಲು ಅವಕಾಶ ಮಾಡಿಕೊಡುವಂತೆ ಪಟೇಲ್ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಗಳ ಮಾಲೀಕರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತು ಎಸ್ಪಿ ಅವರಿಗೆ ಮನವಿ ಸಲ್ಲಿಸಿ, ಜಿಲ್ಲಾಡಳಿತದ ಆದೇಶದ ಮೇರೆಗೆ ಪೊಲೀಸ್ ಇಲಾಖೆಯು ನಗರದ ಪ್ರಮುಖ ವಾಣಿಜ್ಯ ಕೇಂದ್ರ ಪಟೇಲ್ ರಸ್ತೆಯಲ್ಲಿ ಎಲ್ಲ ಸರಕು ವಾಹನಗಳಿಗೆ ಪ್ರವೇಶ ನಿರ್ಬಂಧಿಸಿರುವುದರಿಂದ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಆರೋಪಿಸಿದರು.
ಶೇ.70ರಷ್ಟು ವ್ಯಾಪಾರಿಗಳ ಸ್ಥಳಾಂತರ: ಈ ಹಿಂದೆ ಪಟೇಲ್ ರಸ್ತೆಯಲ್ಲಿ ಕೃಷಿ ಮಾರುಕಟ್ಟೆಯ ವ್ಯಾಪ್ತಿಯ ವ್ಯಾಪಾರಿಗಳು ಸಹ ಇಲ್ಲಿ ವ್ಯವಹಾರ ನಡೆಸುತ್ತಿದ್ದರಿಂದ ದಿನನಿತ್ಯ ಭಾರಿ ವಾಹನಗಳ ಲೋಡಿಂಗ್ ಮತ್ತು ಅನ್ಲೋಡಿಂಗ್ ಮಾಡುತ್ತಿದ್ದು, ಅದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಮಳಿಗೆಗಳ ಸ್ಥಳಾಂತರಕ್ಕೆ ಆಡಳಿತ ನಿರ್ಧರಿಸಿ, ನಗರದ ರಾಜೇಂದ್ರ ಗಂಜ್ ಹತ್ತಿರದ ಸ್ಥಳವನ್ನು ಕೃಷಿ ಮಾರುಕಟ್ಟೆ ವ್ಯಾಪ್ತಿಯ ವ್ಯಾಪಾರಿಗಳಿಗೆ ನೀಡಿದರು. ಈಗಾಗಲೇ ಪಟೇಲ್ ರಸ್ತೆಯಲ್ಲಿರುವ ಶೇ.70ರಷ್ಟು ವ್ಯಾಪಾರಿಗಳು ಅಲ್ಲಿಗೆ ಸ್ಥಳಾಂತರಗೊಂಡಿದ್ದು, ಕೇವಲ ಶೇ. 30ರಷ್ಟು ವ್ಯಾಪಾರಿಗಳು ಮಾತ್ರ ಪಟೇಲ್ ರಸ್ತೆಯಲ್ಲಿದ್ದಾರೆಂದು ವಿವರಿಸಿದರು.
ಗ್ರಾಮಾಂತರ ಪ್ರದೇಶದವರಿಗೆ ಅಡಚಣೆ: ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ. ಹೀಗಾಗಿ ಮುಕ್ತವಾಗಿ ಸರಕು ವಾಹನಗಳ ಲೋಡಿಂಗ್ ಮತ್ತು ಅನ್ಲೋಡಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಬೆ.6ರಿಂದ ರಾತ್ರಿ 9ರವರೆಗೆ ಎಲ್ಲ ವಾಹನಗಳ ಸಂಚಾರವನ್ನು ಪಟೇಲ್ ರಸ್ತೆಯಲ್ಲಿ ಸಾಗಲು ನಿರ್ಬಂಧ ಹೇರಿರುವುದರಿಂದ ವ್ಯಾಪಾರಿಗಳಿಗಿಂತ ಗ್ರಾಮಾಂತರ ಪ್ರದೇಶದವರಿಗೆ ವಹಿವಾಟಿಗೆ ಅಡಚಣೆಯಾಗಿದೆ ಎಂದು ದೂರಿದರು.
ಈ ಬಗ್ಗೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಈ ಹಿಂದೆ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಾರಿಗೆ ಅಧಿಕಾರಿಗಳ ಜತೆ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ತಂಡಕ್ಕೆ ನೀಡಿದರು. ಪಟೇಲ್ ರಸ್ತೆಯ ವ್ಯಾಪಾರಿಗಳ ತಂಡದಲ್ಲಿ ಪಲುಗುಲ ನಾಗರಾಜ, ವೀರಣ್ಣ ಮುದಗಲ್, ಮರಡಿ ನರಸಯ್ಯ ಬದ್ನಾಳ್ ನಾಗರಾಜ, ಚಿಗರಂಬಟ್ಲ ಬಾಲಾಜಿ, ಇಲ್ಲೂರು ಲಕ್ಷ್ಮಯ್ಯ ಸೇರಿ 35ಕ್ಕೂ ಹೆಚ್ಚು ವ್ಯಾಪಾರಿಗಳು ಹಾಜರಿದ್ದರು.