ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕ್ಷಿಪ್ತ ಸುದ್ದಿ

Mainashree
Updated On : 20 Nov 2013, 10:52 am

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ದೇವದುರ್ಗ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮಟ್ಟದ ಆಹಾರ ಧಾನ್ಯ ಹಾಗೂ ಕೊಳೆತ ಮೊಟ್ಟೆ ಸರಬರಾಜು ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಸಿಡಿಪಿಒ ಕಚೇರಿ ಎದುರು ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ, ಗುಣಮಟ್ಟದ ಆಹಾರವನ್ನು ಅಂಗನವಾಡಿಗಳಿಗೆ ಪೂರೈಸಬೇಕು. ಕೆಟ್ಟ ಮೊಟ್ಟೆಗಳನ್ನು ಸರಬರಾಜು ಮಾಡಬಾರದು. ಜಾಲಹಳ್ಳಿ ಅಂಗನವಾಡಿ ಕೇಂದ್ರ ಸಂಖ್ಯೆ 15ರ ಸಹಾಯಕಿ ಸಿದ್ದಮ್ಮ ಅವರಿಗೆ ಕಾರ್ಯಕರ್ತೆ ಹುದ್ದೆಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿ  ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷೆ ರಂಗಮ್ಮ, ಶಕುಂತಲಾ, ವರಲಕ್ಷ್ಮೀ, ಪಿ.ಗಿರಿಯಪ್ಪ, ಶಬ್ಬೀರ್ ಅಹ್ಮದ್ ಜಾಲಹಳ್ಳಿ ಮತ್ತಿತರಿದ್ದರು.
ಕನಕದಾಸರ ಜಯಂತಿ ಇಂದು
ರಾಯಚೂರು: ನಗರದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ನ.20ರಂದು ಆಯೋಜಿಸಲಾಗಿದೆ. ನಗರದ ಗಂಜ್ ವೃತ್ತದಲ್ಲಿ ಬೆಳಗ್ಗೆ 9.15ಕ್ಕೆ ಕನಕದಾಸರ ಪುತ್ಥಳಿಗೆ ಗೌರವ ಸಲ್ಲಿಕೆ ನಂತರ ಮೆರವಣಿಗೆಯು ರಂಗಮಂದಿರದವರೆಗೆ ಸಾಗಲಿದ್ದು, ಮ.2ಕ್ಕೆ ರಂಗಮಂದಿರದಲ್ಲಿ ಸಮಾರಂಭ ಆಯೋಜಿಸಲಾಗಿದೆ. ರಂಗಮಂದಿರದಲ್ಲಿ ನಡೆಯುವ ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ.ನಗರ ಶಾಸಕ ಡಾ. ಶಿವರಾಜ್ ಪಾಟೀಲ ಅಧ್ಯಕ್ಷತೆವಹಿಸುವರು.
ನಾಳೆ ಕಾನೂನು
ಅರಿವು ನೆರವು
ರಾಯಚೂರು; ನಗರದಲ್ಲಿ ದೇವದಾಸಿ ಅನಿಷ್ಠ ಪದ್ಧತಿ ನಿರ್ಮೂಲನೆಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ.21ರಂದು ಆಯೋಜಿಸಲಾಗಿದೆ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವಾಸಿ ಪುನರ್ವಸತಿ ಯೋಜನೆ ಹಾಗೂ ಸರ್ವೋದಯ ಗ್ರಾಮೀಣ ಮಹಿಳಾ ಅಭಿವೃದ್ಧಿ ಸಂಸ್ಥೆ ರಾಯಚೂರು ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಿಲ್ ಕಲೆಕ್ಟರ್ ಮೇಲೆ ಸದಸ್ಯನ ಹಲ್ಲೆ; ಖಂಡನೆ
ಸಿಂಧನೂರು: ಲಿಂಗಸ್ಗೂರು ಪುರಸಭೆಯ ಬಿಲ್ ಕಲೆಕ್ಟರ್‌ನ ಮೇಲೆ ಪುರಸಭೆ ಸದಸ್ಯ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದ್ದು, ಈ ಘಟನೆಯನ್ನು ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ದುರುಗಪ್ಪ ಹಸಮಕಲ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪುರಸಭೆ ಸದಸ್ಯ ಮಹ್ಮದ್ ರಫಿ ಎನ್ನುವವರು ತಮ್ಮ ಮನೆಗೆ ಅಕ್ರಮವಾಗಿ ನಳ ಅಳವಡಿಸಿಕೊಂಡು ಪುರಸಭೆಗೆ ಬಿಲ್ ಕಟ್ಟದೆ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಬಿಲ್ ಕಲೆಕ್ಟರ್ ಜಗದೀಶ್ ಎನ್ನುವವರು ನಳದ ನೀರಿನ ಸಂಪರ್ಕ ಕಡಿತಗೊಳಿಸಲು ಹೋದಾಗ ವಾಗ್ವಾದ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ಜಗದೀಶನ ಮೇಲೆ ಹಲ್ಲೆ ನಡೆಸಿರುವುದು ಅಪರಾಧ. ಕರ್ತವ್ಯದಲ್ಲಿದ್ದ ನೌಕರರನ್ನು ಈ ರೀತಿ ಸಾರ್ವಜನಿಕವಾಗಿ ಹಲ್ಲೆ ಮಾಡಿರುವ ಮಹ್ಮದ್ ರಫಿ ಅವರನ್ನು ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಲಕಿ ಸಜೀವ ದಹನ
ರಾಯಚೂರು: ತಾಲೂಕಿನ ಬಾಪೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಮೂರು ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಬಾಲಕಿಯೊಬ್ಬಳು ಸಜೀವ ದಹನವಾಗಿದ್ದಾಳೆ. ಲಕ್ಷಾಂತರ ಆಸ್ತಿ ಸುಟ್ಟಿದೆ.
ಮೃತಳನ್ನು ಅಂಜಲಿ(10) ಎಂದು ಗುರುತಿಸಲಾಗಿದೆ. ಗ್ರಾಮದ ನರಸಪ್ಪ, ದೊಡ್ಡಪ್ಪ ಎಂಬುವವರಿಗೆ ಸೇರಿದ ಗುಡಿಸಲುಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಹೊತ್ತಿಕೊಂಡಾಗ ಅಂಜಲಿ ಹೊರಬರಲಾಗದೇ ಸಜೀವ ದಹನವಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಯರಗೇರಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement