ಕೇಳುವವರಿಲ್ಲ ವಿದ್ಯಾರ್ಥಿಗಳ ಗೋಳು
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ನ.20
ಪಟ್ಟಣದ ಬಸವಸಾಗರ ಕ್ರಾಸ್ ಹತ್ತಿರದ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೂಲಸೌಕರ್ಯದಿಂದ ವಂಚಿತಗೊಂಡಿದ್ದು, ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ.
ತಾಲೂಕಾದ್ಯಂತ ಸಮಾಜ ಕಲ್ಯಾಣ ಇಲಾಖೆಯಡಿ 20 ವಸತಿ ನಿಲಯ, 3 ಮೊರಾರ್ಜಿ ದೇಸಾಯಿ ವಸತಿ ನಿಲಯ, 1 ಕಿತ್ತೂರು ಚೆನ್ನಮ್ಮ ವಸತಿ ನಿಲಯ, 3 ಆಶ್ರಮ ವಸತಿ ಶಾಲೆಗಳಿವೆ. ಇದರಲ್ಲಿ ಸುಮಾರು 10 ವಸತಿ ನಿಲಯಗಳಿಗೆ ಸ್ವಂತ ಕಟ್ಟಡವಿದ್ದರೆ, ಇನ್ನುಳಿದವು ಬಾಡಿಗೆ ಕಟ್ಟಡ ಆಶ್ರಯ ಪಡೆದಿವೆ. ಇನ್ನು ಕೆಲ ವಸತಿ ನಿಲಯ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿವೆ ಹಾಗೂ ಕೆಲ ವಸತಿ ನಿಲಯಗಳಿಗೆ ಮೇಲ್ವಿಚಾರಕರಿದ್ದರೆ, ಇನ್ನು ಕೆಲ ನಿಲಯಗಳಿಗೆ ಪ್ರಭಾರಿ ಮೇಲ್ವಿಚಾರಕರ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಬಹುತೇಕ ವಸತಿ ನಿಲಯಗಳು ಸಮರ್ಪಕ ಮೂಲಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ತೆಂಗಿನನಾರು ತುಂಬಿದ ಬೆಡ್ಗಳೇ ಗತಿ: ಪಟ್ಟಣದ ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕಳೆದ ಸುಮಾರು 4 ವರ್ಷದಿಂದ ಬೆಡ್ಶೀಟ್, ಬೆಡ್ ಬದಲಾಯಿಸದ ಪರಿಣಾಮ ವಿದ್ಯಾರ್ಥಿಗಳು ತೆಂಗಿನನಾರು ತುಂಬಿದ ಬೆಡ್ಗಳ ಮೇಲೆ ಮಲಗುವ ಗತಿ ಬಂದಿದೆ. ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಸಮೀಪಿಸುತ್ತಿದ್ದರೂ ಕೆಲವರಿಗೆ ಪಠ್ಯಪುಸ್ತಕ ಸಿಗದೆ ಪರದಾಡುವಂತಾಗಿದೆ. ವಸತಿ ನಿಲಯಗಳಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಬೇಕೆಂಬ ನಿಯಮವಿದ್ದರೂ ಕುಡಿಯಲು ಯೋಗ್ಯವಲ್ಲದ ಬೋರ್ವೆಲ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕೆಯಿಂದಲೂ ವಂಚಿತರಾಗಿದ್ದಾರೆ. ನಿಲಯಕ್ಕೆ 2 ಕಂಪ್ಯೂಟರ್ ಉಪಕರಣ ಒದಗಿಸಲಾಗಿದ್ದು, ಅದರಲ್ಲಿನ ಒಂದು ಕಂಪ್ಯೂಟರ್ ನಾಪತ್ತೆಯಾಗಿದೆ. ಇನ್ನೊಂದು ಬೀಗ ಹಾಕಿದ ಕೊಠಡಿಯಲ್ಲಿ ಧೂಳು ಹಿಡಿಯುತ್ತಿದೆ.
2 ಶೌಚಾಲಯ: ಸ್ನಾನದ ಕೊಠಡಿಗಳಿಗೆ ಬಾಗಿಲುಗಳಿಲ್ಲದೆ ಕೆಲ ಬಾರಿ ದನ- ಕರು, ಹಂದಿಗಳು ಕೊಠಡಿಯೊಳಗೆ ಹೋಗಿ ಮಲಮೂತ್ರ ವಿಸರ್ಜನೆ ಮಾಡಿದ ಉದಾರಣೆಗಳಿವೆ. ಇನ್ನು ಶೌಚಾಲಯದ ದುಸ್ಥಿತಿ ಹೇಳತೀರದು. ನಿಲಯದಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೇವಲ 2 ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಲ್ಲಿ ಒಂದು ಉಪಯೋಗವಿಲ್ಲದೆ ಪಾಳು ಬಿದ್ದಿದೆ. ಇನ್ನೊಂದು ಸ್ವಚ್ಛತೆ ಇಲ್ಲದೆ ದುರ್ವಾಸನೆಯಿಂದ ಕೂಡಿದೆ. ನಿಲಯದ ಕಿಟಕಿ ಗಾಜುಗಳು ಒಡೆದ ಪ್ರಯುಕ್ತ ಮಳೆ ನೀರು ಕೊಠಡಿಯೊಳಗೆ ಬರುತ್ತಿದ್ದು, ಮಲಗಲು ತೊಂದರೆಯಾಗಿದೆ. ವಿದ್ಯುತ್ ಅಭಾವ ಉಂಟಾದ ಸಮಯದಲ್ಲಿ ಬ್ಯಾಟರಿ ಚಾಲಿತ ಇನ್ವರ್ಟರ್ ಅಳವಡಿಸಲಾಗಿದೆ. ಆದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ರಿಪೇರಿಗೆಂದು ತೆಗೆದುಕೊಂಡು ಹೋಗಿದ್ದು, ಇದುವರೆಗೆ ಮರಳಿ ತರಲಾಗಿಲ್ಲ.
ಕಟ್ಟಿಗೆಯಿಂದ ಅಡುಗೆ: ನಿಲಯದಲ್ಲಿ ಸುಮಾರು 7 ಜನ ಅಡುಗೆ ಸಿಬ್ಬಂದಿಯಿದ್ದು, ಅಡುಗೆಗೆ ಸಿಲೆಂಡರ್ ಒಲೆ ಬಳಸದೆ ಕಟ್ಟಿಗೆಯಿಂದ ಅಡುಗೆ ಮಾಡಲಾಗುತ್ತಿದೆ. ಇದರಿಂದ ವಸತಿ ನಿಲಯದ ತುಂಬೆಲ್ಲಾ ಹೊಗೆಯಾಡುತ್ತದೆ. ಇಷ್ಟೆಲ್ಲಾ ಅವ್ಯವಸ್ಥೆಯ ಮಧ್ಯೆ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ವಾಸಿಸುವ ದುಸ್ಥಿತಿ ಬಂದೊದಗಿದ್ದರೂ ಅಧಿಕಾರಿಗಳು ಗಮನ ಹರಿಸದ ಪರಿಣಾಮ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಸಂಬಂಧಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸುವ ಮೂಲಕ ಅಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕೆಂಬುದು ವಿದ್ಯಾರ್ಥಿಗಳ ಒತ್ತಾಸೆಯಾಗಿದೆ.