ಪಶುವೈದ್ಯರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ದೇವದುರ್ಗ: ತಾಲೂಕಿನ ವಿವಿಧೆಡೆ ಮೇಕೆ, ಕುರಿ, ದನಗಳಿಗೆ ಕಾಲು- ಬಾಯಿ ರೋಗ ಕಾಣಿಸಿದ್ದು, ಅದರಿಂದ ಈಗಾಗಲೇ ಅನೇಕ ಜಾನುವಾರುಗಳು ಸಾವಿಗೀಡಾಗಿವೆ. ಆದರೆ ಪಶು ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಕಾರಣ ಕೂಡಲೇ ಮೃತ ಜಾನುವಾರುಗಳ ಮಾಲಿಕರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಡಳಿತಕ್ಕೆ ಮನವಿ ಸಲ್ಲಿಸಿ, ಈಚೆಗೆ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ತಾಲೂಕಿನ 180 ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಕಾಣಿಸಿದ್ದು, ರೋಗದಿಂದ ಸಾಕಷ್ಟು ಕುರಿ, ಮೇಕೆಗಳು ಹಾಗೂ ದನಗಳು ಮೃತಪಟ್ಟಿವೆ. ಆದರೆ ಪಶು ವೈದ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು.
ಪಶು ಇಲಾಖೆ ರೋಗ ತಡೆಗೆ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸೂಕ್ತ ಚಿಕಿತ್ಸೆ ದೊರೆಯದೇ ಜಾನುವಾರುಗಳು ಸಾವಿಗೀಡಾಗಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು. ಮಲ್ಲಯ್ಯ ಕಟ್ಟಿಮನಿ, ದುರುಗಣ್ಣ ಇರಬಗೇರಾ, ಸದಾಶಿವ ಗೋಪಾಳಪುರ, ಶಿವನಗೌಡ ಕಲ್ಮನಿ, ಅಡಿವೆಪ್ಪ, ಲಂಕೆಪ್ಪ, ಕರಿಯಪ್ಪ, ನಾಗಪ್ಪ, ಗೂಳಪ್ಪ ಬಸ್ಸಪ್ಪ ಇದ್ದರು.