ಹದಗೆಟ್ಟ ಬಪ್ಪೂರ್ ರಸ್ತೆ
ಸಿಂಧನೂರು: ತಾಲೂಕಿನ ಸಿಂಧನೂರು- ಬಪ್ಪೂರು ರಸ್ತೆ ತೀವ್ರ ಸ್ವರೂಪದಲ್ಲಿ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರಕ್ಕೆ ಅತ್ಯಂತ ತೊಂದರೆಯಾಗಿದೆ ಎಂದು ಸಾರ್ವಜನಿಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಗೀತಾ ಕ್ಯಾಂಪಿನಿಂದ 1 ಕಿಲೋ ಮೀಟರ್ ರಸ್ತೆಯಲ್ಲಿ ಜೆಸಿಬಿಯಿಂದ ತೆಗ್ಗುಗಳನ್ನು ಸಮ ಮಾಡಿದ್ದು, ಕಲ್ಲುಗಳು ಮೇಲೆ ಎದ್ದು ಬಿಟ್ಟಿವೆ. ವಾಹನ ಸಂಚಾರವೇ ಸ್ಥಗಿತಗೊಂಡಿವೆ.
ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಕಲ್ಲುಗಳಲ್ಲಿಯೇ ಓಡಾಡುತಿದ್ದು, ಪ್ರತಿನಿತ್ಯ ಪಂಚರ್, ಟೈರನ ಗಾಳಿ ಇಳಿಯುವುದು. ಇನ್ನಿತರ ಸಮಸ್ಯೆಗಳಾಗಿ ಅಲ್ಲಲ್ಲಿ ನಿಲ್ಲುವುದು ಸಾಮಾನ್ಯ. ನಬಾರ್ಡ್ ಯೋಜನೆಯಲ್ಲಿ ಈ ರಸ್ತೆ ಸುಧಾರಣೆಗೆ 4 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ನಿರ್ಮಾಣದ ಜವಬ್ದಾರಿಯನ್ನು ಕಾರಟಗಿ ಗುತ್ತೇದಾರ ಶ್ರೀನಿವಾಸ ರೆಡ್ಡಿಗೆ ಕೊಡಲಾಗಿದೆ.
ಅವರು ಕೆಲಸದ ಆದೇಶ ಪಡೆದು ಎಂಟು ತಿಂಗಳುಗಳು ಗತಿಸಿದರೂ ಇನ್ನು ಕಾಮಗಾರಿ ಆರಂಭಿಸಿಲ್ಲವೆಂದು ತಿಡಿಗೋಳ ಗ್ರಾಮದ ಪಂಪಾಪತಿ ಆಪಾದಿಸಿದ್ದಾರೆ.
ಈ ಮಧ್ಯೆ ರಸ್ತೆಯಲ್ಲಿದ್ದ ತೆಗ್ಗುಗಳನ್ನು ಮುಚ್ಚಲು ಐದು ಲಕ್ಷ ಖರ್ಚು ತೋರಿದೆ. ಲೋಕೋಪಯೋಗಿ ಇಲಾಖೆಯ ಎ.ಇ.ಇ. ನಾಗರಾಜ ಮತ್ತು ಅವರ ಸಿಬ್ಬಂದಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.