26ರಂದು ಆಳ್ವಾಸ್ ನುಡಿಸಿರಿ ವಿರಾಸತ್
ರಾಯಚೂರು: ಮೂಡಬಿದಿರೆಯಲ್ಲಿ ಡಿಸೆಂಬರ್ನಲ್ಲಿ ನಡೆಯಲಿರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಅಂಗವಾಗಿ ನಗರದಲ್ಲಿ ನ.26 ರಂದು ಆಳ್ವಾಸ್ ನುಡಿಸಿರಿ ವಿರಾಸತ್ನ ಜಿಲ್ಲಾ ಘಟಕದ ಉದ್ಘಾಟನೆ ಸಮಾರಂಭ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದಲ್ಲಿ ಗುರುವಾರ ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಮೂಡಬಿದಿರೆಯಲ್ಲಿ ಡಿ.19-22ರವರೆಗೆ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಆಯೋಜಿಸಿದ್ದು, 10 ವರ್ಷಗಳಿಂದ ವಿರಾಸತ್ ಆಯೋಜಿಸಲಾಗುತ್ತಿದೆ. ಈ ಸಂಭ್ರಮಾಚರಣೆ ಎಲ್ಲೆಡೆ ಪ್ರಚುರಪಡಿಸುವ ಉದ್ದೇಶದಿಂದ ಈ ಬಾರಿ ಜಿಲ್ಲಾ ಘಟಕ ರಚಿಸಿದ್ದು, ಜಿಲ್ಲಾ ಕಸಾಪ ಮತ್ತಿತರೆ ಸಾಹಿತ್ಯ ಸಂಬಂಧಿ ಸಂಘಟನೆಗಳು ಸಹಯೋಗ ನೀಡಿವೆ ಎಂದರು.
ಆವರಣದಲ್ಲಿ ಸಮಾರಂಭ: ವಿರಾಸತ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಘಟಕಗಳ ಉದ್ಘಾಟನೆ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು, ಅದರಂತೆ ನ.26 ರಂದು ನಗರದಲ್ಲಿ ಸಂಜೆ 5.45ಕ್ಕೆ ರಂಗಮಂದಿರದ ಬಳಿಯಿರುವ ಟಾಗೋರ್ ಸ್ಮಾರಕ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಮಹಾದೇವಮ್ಮ, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಪಂ ಸಿಇಒ ಡಾ. ಮುದ್ದುಮೋಹನ್, ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ, ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾಪಾರೆಡ್ಡಿ, ಎಎಂಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಟ್ಕೂರು ರಾಜಣ್ಣ, ನವೋದಯ ಶಿಕ್ಷಣ ಸಂಸ್ಥೆಯ ಎಸ್.ಆರ್. ರೆಡ್ಡಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದರು.
ಕಾರ್ಯಕ್ರಮದ ಅಂಗವಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 235 ವಿದ್ಯಾರ್ಥಿಗಳಿರುವ ಕಲಾವಿದರ ತಂಡ ಆಗಮಿಸಿ ಪುರುಲಿಯಾದ ಸಿಂಹದ ಬೇಟೆ ನೃತ್ಯ, ಭರತನಾಟ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಶ್ರೀಲಂಕಾ ನವಿಲುನೃತ್ಯ, ಮಣಿಪುರಿ ನೃತ್ಯ, ಕೇರಳದ ಒಪ್ಪಣಂ, ಮಹಾರಾಷ್ಟ್ರದ ಲಾವಣಿ ನೃತ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆಂದು ವಿವರಿಸಿದರು.
ರಾಜಿನಾಮೆ ಗೊಂದಲವಿಲ್ಲ: ಜಿಲ್ಲಾ ಕಸಾಪದ ರಾಯಚೂರು, ಲಿಂಗಸ್ಗೂರು ತಾಲೂಕು ಘಟಕಗಳ ಅಧ್ಯಕ್ಷರ ರಾಜಿನಾಮೆ ನೀಡಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ತಾಲೂಕು ಅಧ್ಯಕ್ಷರಾದ ಚಿದಾನಂದ ಸಾಲಿ, ಅಮರೇಶ ಯಾತಗಲ್ ಅವರು ವೈಯಕ್ತಿಕ ಕಾರಣಗಳಿಗೆ ಕಸಾಪದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದರು. ಹಲವರು ಹಾಜರಿದ್ದರು.