ಬತ್ತ, ಹತ್ತಿಗೆ ವೈಜ್ಞಾನಿಕ ಬೆಲೆ ನೀಡಿ
ಕನ್ನಡಪ್ರಭ ವಾರ್ತೆ, ರಾಯಚೂರು, ನ.21
ಬತ್ತ ಮತ್ತು ಹತ್ತಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಸಂಘಟನೆ ನಡೆಸಿದ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನ.25ರಂದು ಸುವರ್ಣಸೌಧ ಚಲೋ ಹೋರಾಟ ಆಯೋಜಿಸಿರುವುದಾಗಿ ರಾಜ್ಯ ರೈತ ಸಂಘದ(ಕೋಡಿಹಳ್ಳಿ ಬಣ) ರಾಜ್ಯ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ. 2ರಿಂದ ನ.7ರವರೆಗೆ ಸಂಘಟನೆಯು ಸಿಂಧನೂರು ತಾಲೂಕಿನ ಧಡೇಸೂಗೂರು ಗ್ರಾಮದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ನಡೆಸಿ ಬತ್ತ ಮತ್ತು ಹತ್ತಿ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿತ್ತು.
ಹೋರಾಟ ಕಡೆಗಣನೆ: ಆದರೆ ಹೋರಾಟದ ವೇಳೆ ಜಿಲ್ಲಾಡಳಿತ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ ಇದುವರೆಗೆ ಯಾವುದೇ ರೀತಿಯ ಬೇಡಿಕೆಯು ಜಿಲ್ಲೆಯಲ್ಲಿ ಈಡೇರಿಲ್ಲ. ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗೆ ಸಂಬಂಧಿಸಿ ರೈತರ ಹೋರಾಟವನ್ನು ಕಡೆಗಣಿಸಲಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಬತ್ತಕ್ಕೆ 1,600 ಪ್ರತಿ ಕ್ವಿಂಟಾಲ್ ಬೆಂಬಲ ಬೆಲೆ ಪ್ರಕಟಿಸಿದೆ. ಆದರೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಬತ್ತವನ್ನು 75 ಕೆಜಿ ಚೀಲದಂತೆ ಪರಿಗಣಿಸಲಾಗುತ್ತದೆ. ಇದಕ್ಕೆ ಹೋಲಿಸಿದರೆ ಬತ್ತದ ಬೆಂಬಲ ಬೆಲೆಯು 1,300ಕ್ಕಿಂತಲೂ ಕಡಿಮೆ ದೊರೆಯುತ್ತದೆ. ಇದರಿಂದ ರೈತರಿಗೆ ನಷ್ಟವಾಗುತ್ತದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಹತ್ತಿ ಮತ್ತು ಬತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡುವಂತೆ ಕೋರಿ ಹೋರಾಟ ನಡೆಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸುವ ಪರಿಸ್ಥ್ಥಿತಿಯಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಕಾರಣಕ್ಕೆ ನ.25ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ಎಚ್ಚರಿಸಿದರು.
ಚಾಮರಸ, ಪುಟ್ಟಣ್ಣಯ್ಯ ಕಾಂಗ್ರೆಸ್ ಪರ ನಿಲುವು: ನ. 25ರ ಹೋರಾಟದಲ್ಲಿ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ರೈತರು ಪಾಲ್ಗೊಳ್ಳಲಿದ್ದಾರೆಂದ ಅವರು, ಕರ್ನಾಟಕ ರಾಜ್ಯ ರೈತ ಸಂಘದ ಚಾಮರಸ ಮಾಲಿಪಾಟೀಲ್ ಮತ್ತು ಪುಟ್ಟಣ್ಣಯ್ಯ ನೇತೃತ್ವದ ಬಣವು ಕಾಂಗ್ರೆಸ್ ಪರವಾದ ನಿಲುವು ಹೊಂದಿದೆ ಎಂದು ಟೀಕಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಸಂದರ್ಭದಲ್ಲಿ ರೈತ ಸಂಘದ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದೇ ಅದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪರವಾದ ರೈತ ಸಂಘದಿಂದ ಹೋರಾಟ ನಿರೀಕ್ಷಿಸುವುದು ತಪ್ಪಾದೀತು ಎಂದು ಲೇವಡಿ ಮಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ ರೈತರು ಅವರಿಗೆ ವಾಹನ ಖರೀದಿಸಿ ನೀಡಿದ್ದಾರೆಂದು ಹೇಳಿದರು.
ಅನಗತ್ಯ ಗೊಂದಲ: ಹಾಸನ ಮೂಲಕ ಚಂದ್ರಶೇಖರ್ ಅವರು ರೈತರಪರ ದನಿ ಎತ್ತುವಂತಾಗಲು ಅವರಿಗೆ ಬೆಂಗಳೂರಿನಲ್ಲಿರುವಂತೆ ವಿವಿಧ ಸೌಲಭ್ಯ ದೊರಕಿಸಿಕೊಟ್ಟಿರುವುದು ರೈತರೇ ವಿನಾ ಯಾವುದೇ ರಾಜಕೀಯ ಪಕ್ಷವಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಎಬ್ಬಿಸುವ ಕಾರ್ಯ ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಿದ್ದರು.