ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾದರ್ಲಿ ಏಕಪಕ್ಷೀಯ ತೀರ್ಮಾನ ಸರಿಯಲ್ಲ: ಲಿಂಗಪ್ಪ

Lingaraj Badiger
Updated On : 22 Nov 2013, 11:37 am

ಕನ್ನಡಪ್ರಭ ವಾರ್ತೆ, ಸಿಂಧನೂರು, ನ.21
ಪ್ರತಿಪಕ್ಷದ ಸದಸ್ಯರನ್ನು ಕಡೆಗಣಿಸುವ ಮೂಲಕ ಶಾಸಕ ಹಂಪನಗೌಡ ಬಾದರ್ಲಿ ಅವರು ದಮನಕಾರಿ ನೀತಿ ಅನುಸರಿಸುತ್ತಿದ್ದು, ರಸ್ತೆಗೆ ಮರಂ ಹಾಕುವ ಕೆಲಸವನ್ನು ಭೂಸೇನಾ ನಿಗಮದವರ ಬದಲು ತಮ್ಮ ಕಾರ್ಯಕರ್ತರಿಂದಲೇ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಲಿಂಗಪ್ಪ ಸಾಹುಕಾರ ಆರೋಪಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಡಗೌಡರು ಅಧಿಕಾರದಲ್ಲಿದ್ದಾಗ ಜೆಡಿಎಸ್ ಕಾರ್ಯಕರ್ತರೇ ಸ್ವಯಂಪ್ರೇರಿತರಾಗಿ ಸ್ವಂತ ಖರ್ಚುನಲ್ಲಿ ವಿವಿಧ ವಾರ್ಡ್‌ಗಳಲ್ಲಿ ಮರಂ ಹಾಕುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅದನ್ನು ತಡೆದು ಟೀಕಿಸಿದ್ದರು.
ಈಗ ಅದೇ ಕಾಂಗ್ರೆಸ್ ಕಾರ್ಯಕರ್ತರು ಟಿಪ್ಪರ್‌ನಿಂದ ವಾರ್ಡ್‌ಗಳಲ್ಲಿ ಮರಂ ಹಾಕುವ ಮೂಲಕ ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೆಸರಿನ ಮಧ್ಯೆ ಜನತೆ ಸಂಚರಿಸುವಾಗ ಸ್ಪಂದಿಸದ ಇವರು, ಈಗ ಜ್ಞಾನೋದಯವಾದವರಂತೆ ವರ್ತಿಸುತ್ತಿದ್ದಾರೆಂದು ಲೇವಡಿ ಮಾಡಿದರು.
ತುಘಲಕ್ ದರ್ಬಾರ್: ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಎಲ್ಲರನ್ನೂ ಗಮನಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಮೂಲಕ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ನಗರಸಭೆ ತುಘಲಕ್ ದರ್ಬಾರ್ ನಡೆಸಿದೆ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಹಲವು ಕಾಮಗಾರಿಗಳು ಕಳಪೆಯಾಗಿದ್ದು, ಅಧಿಕಾರಿಗಳ ಹಾಗೂ ಆಡಳಿತ ಪಕ್ಷದ ರಾಜಕಾರಣಿಗಳ ಪಾರದರ್ಶಕತೆಗೆ ಸಾಕ್ಷಿಯಾಗಿವೆ ಎಂದು ಟೀಕಿಸಿದರು.
ಅವ್ಯವಹಾರದ ಸರಣಿ: ಸಿಂಧನೂರಿನಲ್ಲಿ ಅವ್ಯವಹಾರಗಳ ಸರಣಿಯೇ ನಡೆಯುತ್ತಿದೆ. ಇಷ್ಟು ದಿನ ಪಡಿತರ ಧಾನ್ಯ ಕಳ್ಳಸಾಗಣೆಯಾಗಿತ್ತು. ಈಗ ಸೀಮೆಎಣ್ಣೆ ಕಳ್ಳಸಾಗಣೆ ಶುರುವಾಗಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಶಾಸಕರು ಸೋತಿದ್ದಾರೆ. ಅವ್ಯವಹಾರದ ಹಿಂದಿರುವ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಶಾಸಕರು ಮುಂದಾಗಿರುವುದು ಸರಿಯಲ್ಲ ಎಂದರು.
ಅಕ್ರಮ ಮಾರಾಟ: ನಗರದ ಎಪಿಎಂಸಿ ಗಂಜ್‌ನ 1ನೇ ಗೇಟ್‌ನಲ್ಲಿ ಬುಧವಾರ ಮಧ್ಯರಾತ್ರಿ ಅಕ್ರಮವಾಗಿ ಮೂರು ಲಾರಿಗಳಲ್ಲಿ ಆಹಾರ ಇಲಾಖೆಗೆ ಸೇರಿದ ಸೀಮೆಎಣ್ಣೆಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವುದರ ಹಿಂದೆ ಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಕೂಡಲೇ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಹೋರಾಟ ನಡೆಸಬೇಕಾಗುತ್ತದೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಾಯಿರಾಮಕೃಷ್ಣ ಆಗ್ರಹಿಸಿದರು.
ಮುಖಂಡರಾದ ಧರ್ಮನಗೌಡ, ಮಲ್ಲನಗೌಡ ಮಾವಿನಮಡು, ಪ್ರಕಾಶಬಾಬು ಮಾಲಿಪಾಟೀಲ್, ಜಹೀರುಲ್ಲಾ ಹಸನ, ನಗರಸಭೆ ಸದಸ್ಯ ಎಂ.ಮಹೆಬೂಬ, ಮಾಜಿ ಸದಸ್ಯ ಕರೀಮ್‌ಸಾಬ, ಬಿ.ಸತ್ಯನಾರಾಯಣ, ರಾಮನಗೌಡ ಮಲ್ಕಾಪುರ, ತಿಮ್ಮಾರಡ್ಡಿ ಹುಡಾ, ವೀರೇಶ ಹಟ್ಟಿ, ಸುಮಿತ್ ತಡಕಲ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement