ಅಡ್ಡಪಲ್ಲಕ್ಕಿಗೆ ವಿರೋಧ ಸರಿಯಲ್ಲ; ಸಂಭ್ರಮದ ಆಚರಣೆ ನಿಶ್ಚಿತ
ದೇವದುರ್ಗ: ಪಟ್ಟಣದ ಶಿಖರ ಮಠದಲ್ಲಿ ನ.24ರಂದು ಆಯೋಜಿಸಿರುವ ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ವ್ಯಕ್ತವಾಗುತ್ತಿರುವ ವಿರೋಧದ ಮಧ್ಯೆಯೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಡ್ಡಪಲ್ಲಕ್ಕಿ ಮಹೋತ್ಸವ ಶತಮಾನಗಳಿಂದ ನಡೆಸುತ್ತಾ ಬರಲಾಗಿದೆ. ಅದಕ್ಕೆ ವಿರೋಧಿಸುವುದು ಸರಿಯಲ್ಲ ಎಂದು ತಿಳಿಸಿ, ತಾಲೂಕಿನ ಜಾಲಹಳ್ಳಿಯ ವೀರಶೈವ ಸಮಾಜದಿಂದ ಪಟ್ಟಣದಲ್ಲಿ ಶುಕ್ರವಾರ ಬೈಕ್ ರ್ಯಾಲಿ ನಡೆಸಲಾಯಿತು.
ಜಾಲಹಳ್ಳಿಯಿಂದ ವೀರಶೈವ ಸಮಾಜದ ನೂರಾರು ಜನ ಕಾರ್ಯಕರ್ತರು ಶಿಖರಮಠಕ್ಕೆ ಬೈಕ್ ರ್ಯಾಲಿಯಲ್ಲಿ ಆಗಮಿಸಿ ಅಲ್ಲಿಂದ ಪಾದಯಾತ್ರೆ ಮೂಲಕ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಅಡ್ಡಪಲ್ಲಕ್ಕಿ ಮಹೋತ್ಸವ ಎಂಬುದು ಇಂದು ನಿನ್ನೆಯಿಂದ ಆಚರಿಸುತ್ತಿಲ್ಲ. ಬದಲಿಗೆ ಶತಶತಮಾನಗಳಿಂದರೂ ಆಚರಿಸುವ ಧಾರ್ಮಿಕ ಪದ್ಧತಿಯಾಗಿದೆ. ಅದಕ್ಕೆ ಅನಗತ್ಯ ವಿರೋಧಿಸುವ ಮೂಲಕ ಗೊಂದಲ ಎಬ್ಬಿಸಲಾಗುತ್ತಿದೆ ಎಂದು ದೂರಿದರು.
ಪರಂಪರೆಯ ಪ್ರತೀಕ: ನೂರಾರು ವರ್ಷಗಳಿಂದ ಆಚರಿಸಲಾಗುತ್ತಿರುವ ಅಡ್ಡಪಲ್ಲಕ್ಕಿ ಮಹೋತ್ಸವವು ಪರಂಪರೆಯ ಪ್ರತೀಕವಾಗಿದೆ. ಲಕ್ಷಾಂತರ ಭಕ್ತರ ನಂಬಿಕೆಯ ದ್ಯೋತಕವಾಗಿದ್ದು, ಅಡ್ಡಪಲ್ಲಕ್ಕಿ ಮಹೋತ್ಸವ ವಿರೋಧಿಸುವುದು ಸಮಂಜಸವಲ್ಲ. ವಿರೋಧದ ಹೊರತಾಗಿಯೂ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಿದರು.
ಸಂಭ್ರಮ: ನ. 23ರಂದು ಪಟ್ಟಣದಲ್ಲಿ ಅಬ್ಬೆತುಮಕೂರಿನ ಸ್ವಾಮಿಗಳ ಭವ್ಯ ಮೆರವಣಿಗೆ ಹಾಗೂ ನ. 24ರಂದು ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಭ್ರಮದಿಂದ ನಡೆಯಲಿದೆ. ಅದೇ ದಿನ ಸಂಜೆ ಶಿಖರ ಮಠದಿಂದ ಜಾತ್ರಾಮಮಹೋತ್ಸವ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಶಿಖರಮಠದ ಶ್ರೀಸಿದ್ದರಾಮೇಶ್ವರಶ್ರೀ ನೇತೃತ್ವ ವಹಿಸಿದ್ದರು. ಜಾಲಹಳ್ಳಿ ಹೋಬಳಿಯ ವೀರಶೈವ ಸಮಾಜದ ಮುಖಂಡ ವೀರಣ್ಣ ಬಳೆ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷರಾದ ಎ. ಮಲ್ಲಿಕಾರ್ಜುನ ಪಾಟೀಲ್, ರಾಜಾ ಚಂದ್ರಹಾಸ ನಾಯಕ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಅಮರಣಗೌಡ ಗೌರಂಪೇಟ, ಶಿವನಗೌಡ ಶೆಟ್ಟಿ, ಶಿವನಗೌಡ ಕುಪ್ಪಿ, ಬಸವಂತ್ರಾಯ ಗೌಡ, ಜಾಲಹಳ್ಳಿಯ ವೀರಣ್ಣ ಪಾಣಿ, ಬುಡ್ಡನಗೌಡ ಜಾಗಟಗಲ್, ಲಕ್ಷ್ಮಣ ಜ್ಯೋತಿ, ಬಸವರಾಜ ವಕೀಲರು ಗಾಣದಾಳ, ಚಂದ್ರಶೇಖರ ನಾಡಗೌಡ, ನಾಗರಾಜ ನೀಲಗಲ್ ಮತ್ತಿತರರಿದ್ದರು.