ಇಂದು ಸಿರಿಗಂಧ ಕನ್ನಡ ಕಾರ್ಯಕ್ರಮ
ಸಿಂಧನೂರು: ಸಿಂಧನೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಿರಿಗಂಧ ಕನ್ನಡ ಕಾರ್ಯಕ್ರಮವನ್ನು ನ.23ರಂದು ಮಧ್ಯಾಹ್ನ 12 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ ಸಮಾರಂಭವನ್ನು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ ಬಹುಮಾನ ವಿತರಿಸುವರು. ಅಧ್ಯಕ್ಷತೆಯನ್ನು ಶಾಲೆ ಮುಖ್ಯಗುರು ಇಬ್ರಾಹಿಂ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಸ್.ಶರಣೇಗೌಡ, ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶರಬಸವ ಹಿರೇಮಠ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶ್ರೀಶೈಲ ಕೌದಿ ಭಾಗವಹಿಸುವರೆಂದು ವೀರೇಶ ಗೋನವಾರ ತಿಳಿಸಿದ್ದಾರೆ.
ವ್ಯಕ್ತಿ ಅಪಹರಣ
ಸಿಂಧನೂರು: ತಾಲೂಕಿನ ಗೋನಾಳದ ಮಲ್ಲಯ್ಯ ಹೂಗಾರ ಎನ್ನುವವರನ್ನು ಅದೇ ಗ್ರಾಮದ ದೊಡ್ಡಬಸವ, ಸಂಜೀವ ಮಂಜುನಾಥ ಮತ್ತು ನಾಗಮ್ಮ ಎನ್ನುವವರು ಅಪಹರಿಸಿದ್ದಾರೆ ಎಂದು ಮಲ್ಲಯ್ಯ ಅವರ ಪತ್ನಿ ಪ್ರಮೀಳಮ್ಮ ಬಳಗಾನೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನ್ನ ಗಂಡನ ಮೇಲೆ ಹಲ್ಲೆ ಮಾಡಿ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಪಿಎಸ್‌ಐ ಸಜ್ಜನ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ.
ವಾಹನ ಪಲ್ಟಿ; ಸಾವು
ರಾಯಚೂರು: ದೇವದುರ್ಗ ತಾಲೂಕಿನ ಮಸರಕಲ್ ಬಳಿ ಟಾಟಾ ಏಸ್ ಗಾಡಿ ಪಲ್ಟಿಯಾಗಿ ಶರಣಬಸವ (22) ಎಂಬವರು ಮೃತಪಟ್ಟಿದ್ದಾರೆ. ಈತ ಟಾಟಾ ಏಸ್ ಚಲಾಯಿಸಿಕೊಂಡು ರಾಯಚೂರಿಗೆ ಆಗಮಿಸುತ್ತಿದ್ದ ವೇಳೆ ಮಸಕರಲ್ ಗ್ರಾಮದ ಹೊರವಲಯದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದ್ದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.