ನಾಳೆ ಅಡ್ಡಪಲ್ಲಕ್ಕಿ ಮಹೋತ್ಸವ: ತಾಲೂಕು ಆಡಳಿತಕ್ಕೆ ಎಚ್ಚರಿಕೆ
ದೇವದುರ್ಗ: ಪಟ್ಟಣದಲ್ಲಿ ನ.24 ರಂದು ನಡೆಸಲುದ್ದೇಶಿಸಿರುವ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ತಾಲೂಕು ಆಡಳಿತತಡೆಯದಿದ್ದರೆ ಪಟ್ಟಣದಲ್ಲಿ ನಡೆಯುವ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ತಾಲೂಕು ಮತ್ತು ಜಿಲ್ಲಾಡಳಿತ ಹೊಣೆಯಾಗಲಿದೆ ಎಂದು ಬಸವ ಕೇಂದ್ರದ ಅಧ್ಯಕ್ಷ ಎ. ಪ್ರಕಾಶ ಪಾಟೀಲ್ ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿ ಅವರು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಶಿಖರ ಮಠದಲ್ಲಿ ಅಡ್‌ಡಪಲ್ಲಕ್ಕಿ ಮಹೋತ್ಸವ ಆಯೋಜಿಸಿದ್ದು, ಬಸವ ಕೇಂದ್ರ ಮತ್ತು ಪ್ರಗತಿಪರ ಸಂಘಟನೆಗಳು ಇಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಅಮಾನವೀಯ: ನ.24ರಂದು ನಡೆಯಲಿರುವ ಅಡ್ಡಪಲ್ಲಕಿ ಮಹೋತ್ಸವವನ್ನು ತಡೆಹಿಡಿಯಲು ತಾಲೂಕು ಆಡಳಿತಕ್ಕೆ ಈಗಾಗಲೇ ಮನವಿ ಮಾಡಿದ್ದು, ಆಡಳಿತ ಅಥವಾ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಮಾನವರು ಮತ್ತೊಬ್ಬ ಮನುಷ್ಯನನ್ನು ಹೊತ್ತು ಸಾಗುವುದು ಅಮಾನವೀಯ ಘಟನೆಯಾಗಿದೆ. ಇದರ ಬದಲಿಗೆ ವಾಹನಗಳಲ್ಲಿ ಅಡ್ಡಪಲ್ಲಕಿ ಕೊಂಡೊಯ್ಯುವಂತೆ ಅವರು ಸಲಹೆ ನೀಡಿದರು.
ಇಂತಹ ಮೌಢ್ಯದ ಆಚರಣೆಗೆ ಬಸವ ಕೇಂದ್ರ ಸೇರಿ ಮತ್ತಿತರೆ ಪ್ರಗತಿ ಪರ ಸಂಘಟನೆಗಳಿಂದ ತೀವ್ರ ವಿರೋಧವಿದೆ ಎಂದು ಹೇಳಿದರು.
ಈ ವೇಳೆ ಪ್ರಗತಿಪರ ವೇದಿಕೆಯ ಮರಿಲಿಂಗಪ್ಪ ಕೋಳೂರು, ಬಸವ ಕೇಂದ್ರದ ಮಾಜಿ ಅಧ್ಯಕ್ಷ ಪ್ರಭು ಗದ್ಗಿ, ಅಮರೇಶ ಪಾಟೀಲ್ ಪರತಪೂರ, ಪುರಸಭೆ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಗೋಸಲ, ಪುರಸಭೆ ಮಾಜಿ ಸದಸ್ಯ ರಮೇಶ ಚಲುವಾದಿ, ನರಸಪ್ಪ ವಕೀಲರು, ಬಸವರಾಜ ಹೂವಿನಹೆಡ್ಗಿ, ಶಿವರಾಜ ಅಕ್ಕರಕಿ, ಆಂಜನೇಯ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.