ಹಿಂಗಾರಿಗೆ ನೀರು; ರೈತರಲ್ಲಿ ಗರಿಗೆದರಿದ ನಿರೀಕ್ಷೆ
ಕನ್ನಡಪ್ರಭ ವಾರ್ತೆ, ರಾಯಚೂರು, ನ.22
ಕಳೆದ ವರ್ಷ ಭೀಕರ ಬರ ಮತ್ತು ಎರಡನೇ ಹಂಗಾಮಿಗೆ ತುಂಗಭದ್ರಾ ಎಡದಂಡೆಯಿಂದ ಸಮರ್ಪಕ ನೀರು ದೊರೆಯದೆ ತೀವ್ರ ನಷ್ಟ ಅನುಭವಿಸಿದ್ದ ಜಿಲ್ಲೆಯ ರೈತರ ದೃಷ್ಟಿ ಈಗ ನ.23ರಂದು ನಡೆಯುವ ನೀರಾವರಿ ಸಲಹಾ ಸಮಿತಿಯ ಸಭೆಯತ್ತ ನೆಟ್ಟಿದೆ. ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಕೃಷಿಯ ಭವಿಷ್ಯ ನಿರ್ಧರಿಸಲಿದೆ.
ಕೊಪ್ಪಳದ ಮುನಿರಾಬಾದ್ನಲ್ಲಿ ನ.23ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ನೀರಾವರಿ ಯೋಜನೆ ವ್ಯಾಪ್ತಿಯ ಜಿಲ್ಲೆಯ ರೈತರಲ್ಲಿ ಎರಡನೇ ಹಂಗಾಮಿಗೆ ದೊರೆಯುವ ನೀರಿನ ಪ್ರಮಾಣ ಮತ್ತು ಅವಧಿಯ ಬಗ್ಗೆ ನಿರೀಕ್ಷೆ ಗರಿಗೆದರಿವೆ.
ಕಳೆದ ವರ್ಷ ಭೀಕರ ಬರ ಜಿಲ್ಲೆಯ ರೈತರನ್ನು ಕಾಡಿತ್ತು. ಮಳೆಯ ಅಭಾವದಿಂದ ಕಳೆದ ಬಾರಿ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಂಡಿದ್ದ ನೀರಿನ ಪ್ರಮಾಣವೂ ಕಡಿಮೆಯಾಗಿತ್ತು. ಹಾಗಾಗಿ ನೀರಾವರಿ ಇಲಾಖೆಯು ರೈತರಿಗೆ ಎರಡನೇ ಹಂಗಾಮಿಗೆ ಸಮರ್ಪಕ ನೀರೊದಗಿಸುವಲ್ಲಿ ವಿಫಲವಾಗಿತ್ತು. ಪರಿಣಾಮ ಬೆಳೆಯ ಇಳುವರಿ ಕೊರತೆಯಿಂದ ರೈತರು ಬೆಳೆ ಹಾನಿ ಅನುಭವಿಸಿದ್ದರು.
ಹೆಚ್ಚಿನ ನೀರು ಸಂಗ್ರಹ: ಕಳೆದ ವರ್ಷ ತುಂಗಭದ್ರಾ ಜಲಾಶಯದಲ್ಲಿ 1,624.72 ಅಡಿ ನೀರಿತ್ತು. ಆಗ 72 ಟಿಎಂಸಿ ನೀರಿತ್ತು. ಆದರೆ ಪ್ರಸಕ್ತ ಮೊದಲ ಹಂಗಾಮಿನ ಕೊನೆಗೆ ಶುಕ್ರವಾರ ಸಂಜೆವರೆಗೆ 81 ಟಿಎಂಸಿ ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 9 ಟಿಎಂಸಿ ನೀರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಹೀಗಾಗಿ ರೈತರಲ್ಲಿ ಪ್ರಸಕ್ತ ವರ್ಷದ ಹಿಂಗಾರು ಹಂಗಾಮಿಗೆ ಸಮರ್ಪಕ ನೀರು ದೊರೆಯುವ ಎಲ್ಲ ಲಕ್ಷಣಗಳಿವೆ.
ಕಳೆದ ವರ್ಷ ತುಂಗಭದ್ರಾ ಎಡದಂಡೆ ಕಾಲುವೆಯಿಂದ ರೈತರಿಗೆ ಸಮರ್ಪಕ ನೀರು ಹರಿಸುವಲ್ಲಿ ನೀರಾವರಿ ಇಲಾಖೆ ಸೋತಿತ್ತು. ಮೇಲ್ಭಾಗದ ರೈತರ ರಾಜಕೀಯ ಪ್ರಭಾವದಿಂದಾಗಿ ಕಾಲುವೆಯ ಕಡೆಯ ಭಾಗದ ರೈತರಿಗೆ ನೀರು ದೊರೆತಿತ್ತು ಅಷ್ಟಕ್ಕಷ್ಟೇ. ಹಾಗಾಗಿ ರೈತರು ಬೆಳೆದಿದ್ದ ಬತ್ತ, ಹತ್ತಿ, ಮೆಣಸಿನಕಾಯಿ ಮತ್ತಿತರೆ ಬೆಳೆಗಳಿಗೆ ಫೆಬ್ರವರಿ ತಿಂಗಳಾಂತ್ಯಕ್ಕೆ ನೀರಿನ ಕೊರತೆಯಾಯಿತು.
ಅಧಿಕಾರಿಗಳು ವಿಫಲವಾಗಿದ್ದರು: ಅದೇ ರೀತಿ ನೀರಾವರಿ ಇಲಾಖೆ ಅಧಿಕಾರಿಗಳು ಆಗ ಲಭ್ಯವಿರುವ ನೀರನ್ನು ಎಲ್ಲರಿಗೂ ತಲುಪಿಸುವತ್ತ ವಿಫಲರಾಗಿದ್ದರು. ಅದರಿಂದಾಗಿ ರೈತರು ಬೀದಿಗಿಳಿದು ಹೋರಾಟವನ್ನೂ ನಡೆಸಿದ್ದರು. ಆದರೂ ನೀರು ಮಾತ್ರ ದೊರೆಯಲಿಲ್ಲ. ಪರಿಣಾಮ ರೈತರು ಬೆಳೆಯ ಇಳುವರಿ ಕೊರತೆಯಿಂದ ನಷ್ಟು ಅನುಭವಿಸುವಂತಾಗಿತ್ತು.
ಸಮರ್ಪಕ ನೀರಿನ ನಿರೀಕ್ಷೆ: ಪ್ರಸಕ್ತ ವರ್ಷ ಮುಂಗಾರು ಮಳೆಯ ಅಬ್ಬರದಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಮೊದಲ ಹಂಗಾಮಿಗೆ ನೀರು ಬಿಡುಗಡೆಯಾದ ನಂತರವೂ ಕಳೆದ ವರ್ಷಕ್ಕಿಂತ 9 ಟಿಎಂಸಿ ನೀರು ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ ಜಿಲ್ಲೆಯ ರೈತರು ಪ್ರಸಕ್ತ ಹಿಂಗಾರು ಹಂಗಾಮಿಗೆ ಸಮರ್ಪಕ ನೀರು ದೊರೆಯುವ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು “OÚ«ÚsÚ®ÚúڒOæQ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ತುಂಗಭದ್ರಾ ಎಡದಂಡೆಯಿಂದ ಜಿಲ್ಲೆಯ ಕಡೆಯ ಭಾಗದ ಮಾನವಿ ಮತ್ತು ರಾಯಚೂರು ತಾಲೂಕುಗಳ ರೈತರಿಗೆ ಸಮರ್ಪಕ ನೀರೊದಗಿಸುವಂತೆ ಜಲಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ ಎಂದಿದ್ದಾರೆ.
ಮಾರ್ಚ್ವರೆಗಾದರೂ ನೀರು ಹರಿಸಿ: ಅದರಂತೆ ಡಿ.1ರಿಂದ ಡಿ.15ರವರೆಗೆ ಕಾಲುವೆಯ ಮೇಲ್ಭಾಗದಲ್ಲಿ ಬತ್ತದ ಕಟಾವಿನ ಹಿನ್ನೆಲೆಯಲ್ಲಿ ನೀರಿನ ಹರಿವು ಕಡಿತಗೊಳಿಸಿ ಆನಂತರ ಡಿ.15ರಿಂದ ಫೆಬ್ರವರಿವರೆಗೆ ನೀರಿನ ನಿರ್ವಹಣೆಯ ಮೇಲೆ ಸತತ ನಿಗಾಯಿಡುವ ಮೂಲಕ ರೈತರಿಗೆ ಕನಿಷ್ಠ ಮುಂದಿನ ವರ್ಷದ ಮಾರ್ಚ್ವರೆಗಾದರೂ ಸಮರ್ಪಕ ನೀರೊದಗಿಸಬೇಕೆಂಬುದು ಜಿಲ್ಲೆಯ ರೈತರ ಒತ್ತಾಯ.
-ಜಗನ್ನಾಥ ಆರ್. ದೇಸಾಯಿ