5 ವರ್ಷದದಿಂದ ಪೂರ್ಣಗೊಳ್ಳದ ಗುರುಸದನ
ಕನ್ನಡಪ್ರಭ ವಾರ್ತೆ , ಮುದಗಲ್ ,ನ.23
ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಅನುದಾನ ನೀಡುತ್ತಿದ್ದರೂ, ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆಗಳು ವಿಫಲವಾಗುತ್ತಿವೆ.
ಅದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳು ಇಲ್ಲಿವೆ.
2008-09ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಜಿಪಂ ಮೂಲಕ ಪಟ್ಟಣದ ವೆಂಕಟರಾಯನ ಪೇಟೆ ಸರರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಆ ಶಾಲೆಯ ಶಿಕ್ಷಕರಿಗಾಗಿ ಸುಮಾರು ರು. 24 ಲಕ್ಷ ವೆಚ್ಚದಲ್ಲಿ ಗುರುಸದನ ನಿರ್ಮಿಸಲು ಹಣ ಮಂಜೂರು ಮಾಡಿತು. ಕಾಮಗಾರಿಯನ್ನು ರಾಯಚೂರಿನ ಸರ್ಕಾರಿ ಸ್ವಾಮ್ಯದ ನಿರ್ಮಿತಿ ಕೇಂದ್ರಕ್ಕೆ ನೀಡಿತ್ತು.
ಅಪೂರ್ಣ ಕಾಮಗಾರಿ: ಕಾಮಗಾರಿ ಜವಾಬ್ದಾರಿಯನ್ನು ಹೊತ್ತ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕೆಲಸ ಆರಂಭಿಸಿದರು. ಕಟ್ಟಡ ಅರ್ಧ ಭಾಗ ಕೆಲಸ ಮುಗಿಸಿದ್ದನ್ನು ಕಂಡ ಅಲ್ಲಿನ ಶಿಕ್ಷಕರು ಇನ್ನೇನು ತಮಗೆ ವಾಸ ಮಾಡಲು ಸುಸಜ್ಜಿತ ಕಟ್ಟಡ ಸಿಗುತ್ತದೆ ಎಂದು ಮನಸ್ಸಿನಲ್ಲಿ ಮಂಡಿಗೆ ತಿಂದರು. ಆದರೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಾಮಗಾರಿಯನ್ನು ಅರ್ಪೂಣಗೊಳಿಸಿ 5 ವರ್ಷ ಗತಿಸಿದರೂ ಇತ್ತ ಕಡೆ ತಿರುಗಿ ನೋಡಿಲ್ಲ.
ಕಟ್ಟ ಸಾಮಗ್ರಿಗಳು ಮಾಯ: ಕಟ್ಟಡಕ್ಕೆ ಹಾಕಲಾಗಿದ್ದ ಪಿಲ್ಲರ್ನ ಕಬ್ಬಣದ ರಾಡುಗಳು, ಕೆಂಪು ಇಟ್ಟಿಗೆಗಳು ಮಾಯವಾಗಿವೆ. ಕಟ್ಟಿದ ಗೋಡೆಯನ್ನು ಕೆಡವಿ, ಇಟ್ಟಿಗೆಗಳನ್ನು ದೋಚಲಾಗಿದೆ. ಕಬ್ಬಣದ ರಾಡುಗಳನ್ನು ಕತ್ತರಿಸಿಕೊಂಡು ಹೋಗಿದ್ದರೂ, ಅದರ ಸ್ಥಿತಿಗತಿ ಏನಾಗಿದೆ ಎನ್ನುವುದನ್ನು ಸಹ ತಿಳಿಯಲು ಬಾರದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಕಟ್ಟಡ ನಿರ್ಮಾಣ ಸ್ಥಳದ ಸುತ್ತಲು ಮುಳ್ಳಿನ ಗಿಡಗಳು ಬೇಳೆದು ಪಾಳು ಬಂಗಲೇಯಂತೆ ಕಾಣುತ್ತಿದೆ. ಕಾಮಗಾರಿ ಯಾಕೆ ಸ್ಥಗಿತಗೊಂಡಿದೆ ಎನ್ನುವುದು ಈ ಶಾಲೆಯ ಶಿಕ್ಷಕರಿಗೆ ಅಧಿಕಾರಿಗಳು ತಿಳಿಸಿಲ್ಲ. ಈಗಾಗಿ ಸದನದಲ್ಲಿ ವಾಸಿಸುವ ಯೋಗ ತಮಗೆ ಇಲ್ಲ ಎನ್ನುತ್ತಾರೆ ಈ ಶಾಲೆಯ ಶಿಕ್ಷಕರು.
ತಲೇಖಾನ, ನಾಗಲಾಪೂರ, ನಾಗರಹಾಳ, ಕನ್ನಾಳ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈದೇ ರೀತಿ ನಿರ್ಮಿತಿ ಕೇಂದ್ರ ತಾಲೂಕಿನಲ್ಲಿ ಸಾಕಷ್ಟು ಶಾಲೆಗಳ ಕಟ್ಟಡ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದು ಅರ್ಧಕ್ಕೆ ನಿಲ್ಲಿಸಿದ ಸಾಕಷ್ಟು ವರದಿಗಳನ್ನು ಪತ್ರಿಕೆಗಳಲ್ಲಿ ವರದಿ ಮಾಡಿದರು ಇದ್ಯಾವುದೂ ತಮಗೆ ಸಂಬಂಧ ಇಲ್ಲ ಎನ್ನುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ಸಾವಿರಾರು ಕೋಟಿ ರು.ಗಳ ವೆಚ್ಚದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಲಾ ಕಟ್ಟಡಗಳ ಕಾಮಗಾರಿಯನ್ನು ಇದೇ ಇಲಾಖೆ ನಿರ್ಮಿಸುತ್ತಿದ್ದು ಶಾಸಕರು, ಜಿ.ಪಂ.ಸದಸ್ಯರು, ತಾ.ಪಂ. ಅಧ್ಯಕ್ಷರು ಸದಸ್ಯರು ಕ್ಯಾರೆ ಎನ್ನದೆ ಇರುವುದು ವಿಪರ್ಯಾಸವೇ ಸರಿ ಎನ್ನುತ್ತಾರೆ ಸಾರ್ವಜನಿಕರು.