ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಡ್ಡಪಲ್ಲಕ್ಕಿ; ಅಡ್ಡಿ ಆತಂಕ ನಿವಾರಣೆಗೆ ಪ್ರಯತ್ನ

Vishwanath S
Updated On : 24 Nov 2013, 2:59 am

ಕನ್ನಡಪ್ರಭ ವಾರ್ತೆ , ರಾಯಚೂರು , ನ.23
ಜೇವರ್ಗಿಯಲ್ಲಿ ರಂಭಾಪುರಿಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ವಿರೋಧ ವ್ಯಕ್ತವಾದ ಘಟನೆ ಮರೆಯುವ ಮೊದಲೇ ದೇವದುರ್ಗದಲ್ಲಿ ಉಜ್ಜಯಿನಿಶ್ರೀ ಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಆಚರಣೆಗೂ ವಿರೋಧ ವ್ಯಕ್ತವಾಗಿದೆ. ನ.24ರಂದು ಆಯೋಜಿಸಿರುವ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ತೊಡಕು ಎದುರಾಗದಂತೆ ಪರ ಮತ್ತು ವಿರೋಧಿಗಳ ಸಭೆ ನಡೆಸುವ ಮೂಲಕ ತಾಲೂಕು ಆಡಳಿತವು ಎಚ್ಚರಿಕೆಯ ಹೆಜ್ಜೆಯಿರಿಸಿದೆ.
ಜಿಲ್ಲೆಯಲ್ಲಿ ಸದ್ಯ ದೇವದುರ್ಗದ ಶಿಖರ ಮಠದವತಿಯಿಂದ ಆಯೋಜಿಸಿರುವ ಉಜ್ಜಯಿನಿಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಆಚರಣೆ ಮತ್ತು ಅದರ ವಿರೋಧಿಗಳ ಹೋರಾಟದ್ದೇ ಸದ್ದು. ಬಸವ ಕೇಂದ್ರದ ವತಿಯಿಂದ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅದಕ್ಕೆ ಪ್ರಗತಿಪರ ವಿವಿಧ ಸಂಘಟನೆಗಳು ದನಿಗೂಡಿಸಿವೆ.
ಪರ ವಿರೋಧ: ಈಗಾಗಲೇ ಪಟ್ಟಣದಲ್ಲಿ ಪರ ವಿರೋಧಿ ಪ್ರತಿಭಟನೆಗಳು ನಡೆದಿರುವುದು ತಾಲೂಕು ಆಡಳಿತಕ್ಕೆ ಸಂಕಷ್ಟ ತಂದೊಡ್ಡಿದೆ. ಈಚೆಗೆ ಜೇವರ್ಗಿಯಲ್ಲಿ ರಂಭಾಪುರಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಆಯೋಜನೆಯಿಂದ ಪರ ವಿರೋಧ ಹೋರಾಟಗಳು ಆರಂಭಗೊಂಡಿದ್ದವು. ಅದೇ ಮಾದರಿಯಲ್ಲಿ ದೇವದುರ್ಗದಲ್ಲಿಯೂ ಎರಡೂ ಕಡೆಯವರು ಪ್ರತಿಭಟನೆ ಮೂಲಕ ಈಗಾಗಲೇ ಪರ ವಿರೋಧಿ ಹೇಳಿಕೆ ನೀಡಿದ್ದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ತಹಸೀಲ್ದಾರ್‌ಗೆ ಮನವಿ: ತಾಲೂಕು ವೀರಶೈವ ಸಮಾಜದವರು ಶಿಖರಮಠದ ಶ್ರೀಸಿದ್ದರಾಮೇಶ್ವರಶ್ರೀಗಳ ನೇತೃತ್ವದಲ್ಲಿ ದೇವದುರ್ಗದಲ್ಲಿ ಪಾದಯಾತ್ರೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ, ಅಡ್ಡ ಪಲ್ಲಕ್ಕಿ ಮಹೋತ್ಸವ ಅಮಾನವೀಯವಲ್ಲ.ಪರಂಪರಾಗತವಾಗಿ ನಡೆದುಕೊಂಡ ಧಾರ್ಮಿಕ ಆಚರಣೆಯಾಗಿದೆ. ಭಕ್ತರ ನಂಬಿಕೆಯ ದ್ಯೋತಕವೂ ಹೌದು. ಇಂಥ ಆಚರಣೆಗಳಿಗೆ ವಿರೋಧಿಸುವುದು ಸರಿಯಲ್ಲ ಎಂದು ವಿರೋಧಿಸುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಅದೇ ರೀತಿ ಪ್ರಗತಿ ಪರ ಸಂಘಟನೆಗಳ ಪ್ರಮುಖರು ಕಳೆದ ವಾರ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ವಿರೋಧಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿವೆ. ಹಾಗೆಯೇ ದೇವದುರ್ಗದ ಬಸವ ಕೇಂದ್ರದ ಅಧ್ಯಕ್ಷ ಪ್ರಕಾಶ ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿ ನ.24 ರಂದು ಆಯೋಜಿಸಿರುವ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅಡ್ಡಪಲ್ಲಕ್ಕಿ ಮಹೋತ್ಸವ ಆಚರಣೆ ಅಮಾನವೀಯ ಎಂದಿದ್ದಾರೆ.
ಕಳೆದೊಂದು ವಾರದಿಂದ ದೇವದುರ್ಗದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವದ ಆಚರಣೆಗೆ ಸಂಬಂಧಿಸಿ ಪರ ಮತ್ತು ವಿರೋಧಿ ಹೇಳಿಕೆಗಳು ಕೇಳಿಬಂದಿದ್ದು, ನ.24ರಂದು ಮಹೋತ್ಸವಕ್ಕೆ ಅಡ್ಡಿ ಆತಂಕಗಳು ಎದುರಾಗುವ ಸಾಧ್ಯತೆಬಗ್ಗೆ ಆಡಳಿತ ಗಮನಹರಿಸಿದೆ.
ನಿರ್ಬಂಧ: ಈ ಹಿನ್ನೆಲೆಯಲ್ಲಿ ದೇವದುರ್ಗದಲ್ಲಿ ಶನಿವಾರ ಅಡ್ಡಪಲ್ಲಕ್ಕಿ ಮಹೋತ್ಸವ ಆಚರಣೆಯ ಕುರಿತು ಪರ ಹಾಗೂ ವಿರೋಧಿ ಬಣದವರನ್ನು ಕರೆಯಿಸಿ, ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಲಾಗಿದೆ. ಅಡ್ಡಪಲ್ಲಕ್ಕಿ ಮಹೋತ್ಸವದ ಆಚರಣೆಗೆ ಸರ್ಕಾರದಿಂದ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ. ಈ ಹಿನ್ನೆಲೆಯಲ್ಲಿ ಅಡ್‌ಡಪಲ್ಲಿಕ್ಕಿ ಆಚರಣೆಗೆ ಅಡ್ಡಿಪಡಿಸುವಂತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಗೊತ್ತಾಗಿದೆ.
ಈ ಕುರಿತು ಕನ್ನಡಪ್ರಭಕ್ಕೆ ಮಾತನಾಡಿದ ಸಿಪಿಐ ರಮೇಶ್ ಮೇಟಿ ಅವರು, ಅಡ್ಡಪಲ್ಲಕ್ಕಿ ಮಹೋತ್ಸವದ ಆಚರಣೆಗೆ ಸಂಬಂಧಿಸಿ ಎರಡೂ ಬಣಗಳವರನ್ನು ಕರೆಯಿಸಿ ಸಭೆ ನಡೆಸಿದ್ದು, ಶಾಂತಿಯುತವಾಗಿ ಮಹೋತ್ಸವದ ಆಚರಣೆಗೆ ಎರಡೂ ಕಡೆಯವರು ಸಮ್ಮತಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಧಾರ್ಮಿಕ ಆಚರಣೆಯ ವೇಳೆ ದೇವದುರ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.
ಪ್ರಗತಿ ಪರರ ತೀವ್ರ ವಿರೋಧದ ಹೊರತಾಗಿಯೂ ದೇವದುರ್ಗದಲ್ಲಿ ನ.24ರಂದು ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳು ಜಾರಿಯಲ್ಲಿದ್ದು, ಪೊಲೀಸ್ ಇಲಾಖೆ ಸಹ ಸಜ್ಜಾಗಿದೆ.
'ಅಡ್ಡಪಲ್ಲಕ್ಕಿ ಗುರು ಗೌರವದ ಪ್ರತೀಕ'
ಧ್ವನಿಸುರುಳಿ-ವಚನ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಡಾ.ಗಂಗಾಧರ ಶಿವಾಚಾರ್ಯಶ್ರೀ
ದೇವದುರ್ಗ: ಅಡ್ಡಪಲ್ಲಕ್ಕಿ ಮಹೋತ್ಸವವು ಆಯಾ ಪೀಠಗಳ ಭಕ್ತರು ತಮ್ಮ ಗುರುಗಳಿಗೆ ಅರ್ಪಿಸುವ ಗೌರವದ ಪ್ರತೀಕ ಎಂದು ಅಬ್ಬೆ ತುಮಕೂರಿನ ಡಾ. ಗಂಗಾಧರ ಶಿವಾಚಾರ್ಯ ಶ್ರೀ ಹೇಳಿದರು.
ಪಟ್ಟಣದ ಶಿಖರ ಮಠದಲ್ಲಿ ಅಯೋಜಿಸಿದ್ದ ವಿಶ್ವವಚನ ಓಂಕಾರ ಧ್ವನಿ ಸುರುಳಿ ಬಿಡುಗಡೆ ಹಾಗೂ ವಚನ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸೂರ್ಯ, ಚಂದ್ರರಿರುವವರೆಗೆ ಯಾರಿಂದಲೂ ಅಡ್ಡಪಲ್ಲಕ್ಕಿ ಮಹೋತ್ಸವ ತಡೆಯಲಾಗದು ಎಂದು ಹೇಳಿದರು.
ಅಡ್ಡಪಲ್ಲಕಿ ಮಹೋತ್ಸವ ಪರಂಪರಾಗತವಾಗಿ ಆಚರಿಸಲಾಗುತ್ತಿದೆ. ಅದು ಈಚಿನ ದಿನಗಳಲ್ಲಿ ಜಾರಿಗೆ ತಂದಂಥ ಧಾರ್ಮಿಕ ಕಾರ್ಯವಲ್ಲ. ಮಹಾಸ್ವಾಮಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಕರೆತರುವುದು ದರ್ಪ ಎಂದು ಹೇಳುವಂತಿಲ್ಲ. ಸಾವಿರಾರು ಭಕ್ತರು ತಮ್ಮ ಗುರುಗಳಿಗೆ ಗೌರವದಿಂದ ಸಲ್ಲಿಸುವ ಬಗೆಯೇ ಅಡ್ಡಪಲ್ಲಕ್ಕಿ ಮಹೋತ್ಸವ ಆಗಿದೆ ಎಂದರು.
ಸಮಾರಂಭದಲ್ಲಿ ಶಿಖರಮಠದ ಸಿದ್ದರಾಮೇಶ್ವರ ಸ್ವಾಮಿ, ವೀರಮಹಾಂತ ಶ್ರೀ, ಬೆಳಗಾವಿಯ ಗುರುಲಿಂಗ ಶ್ರೀ, ಶಿರಹಟ್ಟಿಯ ನಂದೀಶ್ವರ ಶ್ರೀ, ಪ್ರಾಧ್ಯಾಪಕಿ ಮೀನಾಕ್ಷಿ ಕಂಟಿಮಠ, ವೀರಶೈವ ಸಮಾಜದ ಅಧ್ಯಕ್ಷ ಎ. ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿದರು.
ಬಣಜಿಗ ಸಮಾಜದ ಅಧ್ಯಕ್ಷ ಪ್ರಕಾಶ ಖೇಣದ್, ರಾಜಾ ಚಂದ್ರಹಾಸ ನಾಯಕ, ಬಿಜೆಪಿ ಮುಖಂಡ ವೆಂಕಟೇಶ ಪೂಜಾರಿ, ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ, ಶಿವನಗೌಡ ಶೆಟ್ಟಿ, ಬಸವಂತ್ರಾಯ ಪೊಲೀಸ್ ಪಾಟೀಲ್, ಶಿವನಗೌಡ ಕುಪ್ಪಿ, ವಿರುಪಾಕ್ಷಯ್ಯ ಸ್ವಾಮಿ ಪತ್ರಿಮಠ, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ ಸೇರಿ ಅನೇಕರಿದ್ದರು.



ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement