ಲೋಕ್ ಅದಾಲತ್‌ನಿಂದ ಶೀಘ್ರ ವ್ಯಾಜ್ಯ ಇತ್ಯರ್ಥ
ಕನ್ನಡಪ್ರಭ ವಾರ್ತೆ , ರಾಯಚೂರು , ನ.23
ಸಿಬ್ಬಂದಿ ಕೊರತೆ, ಕಡಿಮೆ ಸಂಖ್ಯೆಯ ನ್ಯಾಯಾಲಯಗಳಿಂದಾಗಿ ಅನೇಕ ವ್ಯಾಜ್ಯಗಳು ಪರಿಹಾರ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೆಗಾಲೋಕ ಅದಾಲತ್ ಆಯೋಜಿಸಲಾಗಿದೆ. ಈ ಮೂಲಕ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ದಾರಿಯಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರದ ಪಿ. ಕೃಷ್ಣ ಭಟ್ ಹೇಳಿದರು.
ಅವರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮೆಗಾ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿ, ಬಹುಕಾಲದಿಂದ ಇತ್ಯರ್ಥಗೊಳ್ಳದೇ ಉಳಿದಿದ್ದ ಪ್ರಕರಣಗಳ ವಿಲೇವಾರಿಗೆ ಲೋಕ ಅದಾಲತ್ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಲೇವಾರಿ: ಜಿಲ್ಲೆಯಲ್ಲಿ ಕಳೆದ 4 ತಿಂಗಳಲ್ಲಿ 3258 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಕಡಿಮೆ ಸಂಖ್ಯೆಯ ನ್ಯಾಯಾಲಯಗಳು, ಸಿಬ್ಬಂದಿ ಕೊರತೆ ಮತ್ತು ಸ್ಥಳದ ಅಭಾವದಿಂದ ಜಿಲ್ಲೆಯಲ್ಲಿ ಸುಮಾರು 21 ಸಾವಿರ ವ್ಯಾಜ್ಯಗಳು ಇನ್ನೂ ವಿಲೇವಾರಿಯಾಗಬೇಕಿದೆ ಎಂದರು.
ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಇತ್ಯರ್ಥಗೊಳ್ಳದ ಪ್ರಕರಣಗಳ ತ್ವರಿತ ವಿಲೇವಾರಿಗೆ ಹಾಗೂ ವ್ಯಾಜ್ಯಗಳ ಹೊರೆ ತಪ್ಪಿಸಲು ಕಾನೂನಿಯ ಮಾರ್ಗದಲ್ಲಿಯೇ ರಾಜಿ ಮುಖಾಂತರ ಪರಿಹರಿಸುವ ಲೋಕ ಅದಾಲತ್ ಇದಾಗಿದೆ ಎಂದ ಅವರು, ಸದ್ಯ ಅದಾಲತ್ ಮೂಲಕ 3258 ಪ್ರಕರಣಗಳು ವಿಲೇವಾರಿಯಾಗಿರುವುದು ಸಾಮಾನ್ಯ ಸಂಗತಿಯಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೋಕ ಅದಾಲತ್ ಮೂಲಕ ಸಾವಿರಾರು ಪ್ರಕರಣಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವುದು ಸರಳವಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ವಕೀಲರ, ನ್ಯಾಯಾಧೀಶರ, ಕಕ್ಷಿದಾರರ, ಪೊಲೀಸ್, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಂಘಟಿತ ಪ್ರಯತ್ನವಿದೆ. ಎಲ್ಲರ ಶ್ರಮದಿಂದ ಸಾಧನೆ ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.
ಕವಚ: ದೇಶದ ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಗ್ರಾಮದ ಪ್ರಮುಖರ ಸಮಕ್ಷಮದಲ್ಲಿ ಸಣ್ಣಪುಟ್ಟ ವ್ಯಾಜ್ಯಗಳನ್ನು ಪರಸ್ಪರ ಸಂಧಾನದ ಮೂಲಕ ಪರಿಹರಿಸಲಾಗುತ್ತಿತ್ತು. ಅಂಥ ಸಂಧಾನ ಪದ್ಧತಿಗೆ ಸದ್ಯ ಕಾನೂನಿನ ಕವಚ ತೊಡಿಸುವ ಮೂಲಕ ಲೋಕ ಅದಾಲತ್ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಭಾನುರಾಜ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಯಲ್ಲಿ ನಡೆದ ಅನೇಕ ಲೋಪಗಳಿಂದಾಗಿಯೇ ದೇಶದಲ್ಲಿ ಕೋಟ್ಯಂತರ ವ್ಯಾಜ್ಯಗಳು ವಿಲೇವಾರಿಯಯಾಗದೇ ಉಳಿದಿವೆ. ಇಂಥ ಪರಿಸ್ಥಿತಿಯಲ್ಲಿ ಪರಸ್ಪರರನ್ನು ಒಂದೆಡೆ ಸೇರಿಸಿ ಸಂಧಾನದಿಂದ ಪ್ರಕರಣ ಇತ್ಯರ್ಥ ಪಡಿಸುತ್ತಿರುವ ಕೆಲಸ ನಿರಂತರ ನಡೆದಲ್ಲಿ ವ್ಯಾಜ್ಯಗಳ ಭಾರ ಶೀಘ್ರ ಇಳಿಕೆಯಾಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಮಹಮ್ಮದ್ ಮುಜಾಹಿದ್ ಉಲ್ಲಾ, ವಕೀಲರ ಸಂಘದ ಕಾರ್ಯದರ್ಶಿ ಪ್ರಭುದೇವ ಪಾಟೀಲ್, ವಕೀಲರಾದ ವರದರಾಜ, ಎಚ್. ಜಗದೀಶ, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು ಅದಾಲತ್ ನಲ್ಲಿ ಪಾಲ್ಗೊಂಡಿದ್ದರು.