ಉತ್ತಮ ಸಾಧನೆ
ರಾಯಚೂರು: ನಗರದಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಲಂಪಿಯಾಡ್ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ತಾಲೂಕಿನ ಉಡುಮಗಲ್ ಖಾನಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಲ್ಲಿಕಾ ಉತ್ತಮ ಸಾಧನೆ ಮೆರೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಶಾಲೆ, ಪರೀಕ್ಷೆಯ ಗಣಿತ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಮಲ್ಲಿಕಾ ಅವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ತಿಳಿಸಿ ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಬೋಧಕ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.
ಶಿಕ್ಷಕಗೆ ಪ್ರಶಸ್ತಿ
ರಾಯಚೂರು: ತಾಲೂಕಿನ ಜೇಗರಕಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ತರಬೇತುದಾರ, ಶಿಕ್ಷಕ ಬಾಲಯ್ಯ ನಾಯಕರಿಗೆ ಚಿತ್ರದುರ್ಗದ ತಾರಾ ಮಂಡಲ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕ್ರಿಯೇಟಿವಿಟಿ ಪ್ರಶಸ್ತಿ ನೀಡಲಾಗಿದೆ. ಚಿತ್ರದುರ್ಗದ ತಾರಾಮಂಡಲ ಸಂಸ್ಥೆ ಈಚೆಗೆ ಆಯೋಜಿಸಿದ್ದ 8ನೇ ಅಂತಾರಾಷ್ಟ್ರೀಯ ವಿಜ್ಞಾನ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತಾಲೂಕಿನ ಜೇಗರಕಲ್ ಶಾಲೆಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ಶಿಕ್ಷಕ ಬಾಲಯ್ಯ ನಾಯಕರಿಗೆ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕ್ರಿಯೇಟಿವಿಟಿ ಪ್ರಶಸ್ತಿ ನೀಡಿ ಗೌರವಿಸಿದೆ.
ನಾಟಕ ಸ್ಪರ್ಧೆ
ರಾಯಚೂರು: ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಈಚೆಗೆ ಪ್ರೌಢಶಾಲಾ ಮಕ್ಕಳಿಗಾಗಿ ಗುಲ್ಬರ್ರ್ಗ ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗುಲ್ಬರ್ಗಾದಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ನೀರೋ ನೀರು ಎಂಬ ನಾಟಕಕ್ಕೆ ದ್ವಿತೀಯ ಸ್ಥಾನ ಲಭಿಸಿದ್ದು,ಶಾಲೆಯ ವಿದ್ಯಾರ್ಥಿನಿ ಸವಿತಾ ಉತ್ತಮ ನಟಿ ಪ್ರಶಸ್ತಿ ಹಾಗೂ ಶಿಕ್ಷಕ ಹ್ಯಾಟಿ ರಮೇಶ್ ಅವರಿಗೆ ಉತ್ತಮ ನಾಟಕ ರಚನೆಕಾರ ಎಂಬ ಪ್ರಶಸ್ತಿಯೂ ಈ ವೇಳೆ ಲಭಿಸಿದೆ.